ಯೋಜನೆಗಳಿಗೆ ಚಾಲನೆ ನೀಡಿ ಗುಡುಗಿದ ಮೋದಿ – ಕಲ್ಯಾಣ ಕರ್ನಾಟಕದಲ್ಲಿ ‘ನಮೋ’ ಹವಾ!

ಯೋಜನೆಗಳಿಗೆ ಚಾಲನೆ ನೀಡಿ ಗುಡುಗಿದ ಮೋದಿ – ಕಲ್ಯಾಣ ಕರ್ನಾಟಕದಲ್ಲಿ ‘ನಮೋ’ ಹವಾ!

ಕನ್ನಡದಲ್ಲೇ ಭಾಷಣ ಆರಂಭ. ಯೋಜನೆಗಳ ಬಗ್ಗೆ ಮಾತಾಡುತ್ತಲೇ ಸಿಡಿಲಿನಂತೆ ಅಬ್ಬರ. ಕಲ್ಯಾಣ ಕರ್ನಾಟಕದ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ ಪರಿ ಇದು. ಹಿಂದಿನ ಸರ್ಕಾರಗಳು ಮಾಡಲಾಗದ ಕೆಲಸವನ್ನ ನಾವು ಮಾಡಿದ್ದೇವೆ ಎನ್ನುತ್ತಲೇ ಮೋದಿ ರಣಕಹಳೆ ಮೊಳಗಿಸಿದ್ರು.

ವಿಧಾನಸಭಾ ಚುನಾವಣೆ ಸಮೀಪದಲ್ಲೇ ಇವತ್ತು ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಅಲೆ ಎಬ್ಬಿಸಿದ್ರು. ಯಾದಗಿರಿ ಹಾಗೂ ಕಲಬುರಗಿಯಲ್ಲಿ ಕೇಸರಿ ನಗಾರಿ ಬಾರಿಸಿದ್ರು. ಮೊದಲಿಗೆ ಯಾದಗಿರಿ ಜಿಲ್ಲೆ ಕೊಡೆಕಲ್ ಗ್ರಾಮದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗೆ ಚಾಲನೆ ನೀಡಿದ್ರು. ಸಮಾವೇಶದ ವೇದಿಕೆಗೆ ಮೋದಿ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೋದಿ ಮೋದಿ ಎಂದು ಜೈಕಾರ ಹಾಕಿದ್ರು. ಕರ್ನಾಟಕದಲ್ಲಿರುವ ಎಲ್ಲ ಸಹೋದರ, ಸಹೋದರಿಯರಿಗೆ ನನ್ನ ವಂದನೆಗಳು ಎನ್ನುತ್ತಲೇ ಪ್ರಧಾನಿ ಮೋದಿ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಬಡಕುಟುಂಬಕ್ಕೆ ತಿಂಗಳಿಗೆ 2 ಸಾವಿರ ರೂಪಾಯಿ – ರಾಜ್ಯಸರ್ಕಾರದ ನಿರ್ಧಾರ

ಬಳಿಕ ಮಾತನಾಡಿದ ಮೋದಿ ಕರ್ನಾಟಕದಲ್ಲಿಂದು ಸಾವಿರಾರು ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ನಾರಾಯಣಪುರ ಎಡದಂಡೆ ಯೋಜನೆಯ ವಿಸ್ತರಣೆ, ಆಧುನೀಕರಣಗೊಳಿಸಲಾಗಿದೆ. ಇದರಿಂದ ಮೂರು ಜಿಲ್ಲೆಗಳ ಲಕ್ಷಾಂತರ ರೈತರಿಗೆ ನೇರ ಲಾಭವಾಗಲಿದೆ. ಯಾದರಿಗಿಯ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಸೂರತ್-ಚೆನ್ನೈ ಎಕನಾಮಿಕ್ ಕಾರಿಡಾರ್​ನ ಕರ್ನಾಟಕದ ಭಾಗದ ಕೆಲಸವು ಇಂದಿನಿಂದ ಆರಂಭವಾಗಲಿದೆ. ಇದರಿಂದ ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಜನಜೀವನ ಸುಧಾರಿಸಲಿದೆ. ಉದ್ಯಮಗಳು ಹೆಚ್ಚಾಗಲಿವೆ ಎಂದು ಮೋದಿ ಹೇಳಿದರು.

ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮುಂದಿನ ದಶಕವನ್ನು ನೀರಾವರಿ ದಶಕ ಎಂದು ಘೋಷಣೆ ಮಾಡಿದರು. ಹೆಚ್ಚು ಸಂಪನ್ಮೂಲ, ಹಣ ಒದಗಿಸಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು. ಬೋಲೋ ಭಾರತ್ ಮಾತಾ ಕಿ ಜೈ ಎಂದು ಭಾಷಣ ಆರಂಭಿಸಿದ ಸಿಎಂ ಬೊಮ್ಮಾಯಿ, ಸುರಪುರದ ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ್ದು ವಿಶೇಷವಾಗಿತ್ತು.

ಇನ್ನು ಕಲಬುರಗಿಯಲ್ಲೂ ಕೂಡ ಮೋದಿ ಕಹಳೆ ಮೊಳಗಿತ್ತು. ಶರಣರ ನಾಡು ಕಲಬುರಗಿಯಲ್ಲಿ ಬಂಜಾರ ನಗಾರಿ ಬಾರಿಸೋ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದ್ರು. ಬಳಿಕ ಲಂಬಾಣಿ ಸಮುದಾಯದವರಿಗೆ ಮನೆಗಳ ಹಕ್ಕುಪತ್ರ ವಿತರಣೆ ಮಾಡಿದ್ರು. ಸಾಂಕೇತಿಕವಾಗಿ 5 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ್ರು. ಒಟ್ಟಾರೆ 5 ಜಿಲ್ಲೆಗಳ 51,900 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಇನ್ನು ಸಮಾವೇಶದಲ್ಲಿ ಪ್ರಧಾನಿ ಮೋದಿ ಬಂಜಾರ ಭಾಷೆಯಲ್ಲಿ ಭಾಷಣ ಶುರು ಮಾಡಿದ್ರು. ನಂತರ ಶರಣ ಬಸವೇಶ್ವರ, ಗಾಣಗಾಪುರದ ಗುರುದತ್ತಾತ್ರೇಯರಿಗೆ ನಮಸ್ಕಾರಗಳು. ಕನ್ನಡ ನಾಡಿನ ಸಮಸ್ತ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೂ ಕಾರ್ಯಕರ್ತರನ್ನ ಹುರಿದುಂಬಿಸಿದ್ರು. ಬಳಿಕ ಮಾತನಾಡಿದ ಮೋದಿ ಹಲವು ವರ್ಷಗಳ ಬಳಿಕ ಬದಲಾವಣೆಯ ಪರ್ವ ಶುರುವಾಗಿದೆ. ಸಮಾಜದಲ್ಲಿ ಎಲ್ಲಾ ಸಮುದಾಯಕ್ಕೂ ಡಬಲ್ ಇಂಜಿನ್ ಸರ್ಕಾರ ಮೂಲಭೂತ ಸೌಕರ್ಯ ಒದಗಿಸುತ್ತೆ ಅಂದ್ರು. ಇದೇ ವೇಳೆ ತಾಂಡಾಗಳನ್ನ ಕಂದಾಯ ಗ್ರಾಮ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತು.

suddiyaana