ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಗೆ ಕೌಂಟ್ ಡೌನ್ – ಮೋದಿ ಭೇಟಿ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್!
ಪ್ರಧಾನಿ ನರೇಂದ್ರ ಮೋದಿ ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ ಮಾಡಲಿದ್ದಾರೆ. ಮಂಡ್ಯ ಜಿಲ್ಲೆಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಭಾನುವಾರ (ಮಾರ್ಚ್ 12)ರಂದು ಬೆಳಗ್ಗೆ 7 ಗಂಟೆಯಿಂದಲೇ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ.
ಪ್ರಧಾನಿ ಭೇಟಿ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತಿದೆ. ಆದರೂ ಕೂಡ ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ 9 ಗಂಟೆಯವರೆಗೆ ಮಾತ್ರ ಸರ್ವಿಸ್ ರಸ್ತೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹಾಗೇ ಮದ್ದೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ತೆರಳುವ ವಾಹನಗಳಿಗೆ ಬೆಳಗ್ಗೆ 9.30ರ ವರೆಗೆ ಅವಕಾಶ ನೀಡಲಾಗುತ್ತಿದೆ. ಮಳವಳ್ಳಿ ಕಡೆಯಿಂದ ಬರುವ ವಾಹನಗಳು ಕೆ.ಎಂ ದೊಡ್ಡಿ- ಹುಣ್ಣನದೊಡ್ಡಿ ಬೋರಾಪುರ ಗೇಟ್ ಮಾರ್ಗವಾಗಿ ಮದ್ದೂರಿಗೆ ಬರಲು ಅವಕಾಶ ನೀಡಲಾಗುತ್ತಿದ್ದು, ಸಮಾವೇಶಕ್ಕೆ ಬರುವ ವಾಹನಗಳ ನಿಲುಗಡೆಗೆ ಸಮಾವೇಶದ ಸ್ಥಳವಾದ ಗೆಜ್ಜಲಗೆರೆ ಕಾಲೋನಿಯಿಂದ 4 ಕೀಲೋ ಮೀಟರ್ ದೂರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಗೆಜ್ಜಲಗೆರೆ ಸುತ್ತಮುತ್ತ ಗ್ರಾಮಗಳಿಗೆ ತೆರಳುವವರು ಗೆಜ್ಜಲಗೆರೆ ಅಂಡರ್ ಪಾಸ್ನಿಂದ ಕುದುರ ಗುಂಡಿ ಗ್ರಾಮ ಸಾದೋಳಲು ಮಾರ್ಗವಾಗಿ ತೆರಳಬಹುದಾಗಿದೆ.
ಇದನ್ನೂ ಓದಿ : ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..?
ಮಂಡ್ಯ ನಗರ ಮತ್ತು ಮದ್ದೂರು ಠಾಣಾ ವ್ಯಾಪ್ತಿಯ ಗೆಜ್ಜಲಗೆರೆ ಕಾಲೋನಿ ಬಳಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಣ್ಯರು ಸೇರಿದಂತೆ ಸಾವಿರಾರು ಜನ ಭಾಗಿಯಾಗಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಮಾರ್ಚ್ 12 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಮೈಸೂರು ಬೆಂಗಳೂರು, ಬೆಂಗಳೂರು ಮಲೆಮಹಾದೇಶ್ವರ, ಮೈಸೂರು ತುಮಕೂರು ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕೂನೂನು ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸುವ ವಾಹನಗಳು ಬನ್ನೂರು ಕಿರುಗಾವಲು, ಮಳವಳ್ಳಿ, ಹಲಗೂರು, ಕನಕಪುರದಿಂದ ಸಾಗಿ ಬೆಂಗಳೂರು ತಲುಪಬಹುದಾಗಿದೆ. ಮೈಸೂರಿನಿಂದ ಮಂಡ್ಯ ಮೂಲಕ ತುಮಕೂರಿಗೆ ಹೋಗುವ ವಾಹನಗಳು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರದಿಂದ ಮೈಸೂರಿಗೆ ತೆರಳುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕಿರುಗಾವಲು ಬನ್ನೂರು ಮೂಲಕ ಮೈಸೂರಿಗೆ ವಾಹನಗಳು ತೆರಳಬಹುದಾಗಿದೆ. ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು ಚನ್ನಪಟ್ಟಣ, ಹಲಗೂರು, ಮಳವಳ್ಳಿ ಮೂಲಕ ಕೊಳ್ಳೇಗಾಲ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬಹುದಾಗಿದೆ.
ಬೆಂಗಳೂರು-ಮೈಸೂರು ಹೈವೇಯನ್ನು ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯುವ ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. 16 ಎಕರೆ ವಿಸ್ತೀರ್ಣದಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಆಗಮನ ಹಿನ್ನಲೆ ಜಿಲ್ಲಾಡಳಿತ ಭಾರಿ ಎಚ್ಚರಿಕೆ ವಹಿಸುತ್ತಿದೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ.