ಬೇಲ್ ಸಿಗ್ತಿದ್ದಂತೆ ಬಿಲದಿಂದ ಹೊರಬಂದ ಬಿಜೆಪಿ ಶಾಸಕ – ಬೆಂಬಲಿಗರೊಂದಿಗೆ ಮಾಡಾಳ್ ಮೆರವಣಿಗೆ..!

ಬೇಲ್ ಸಿಗ್ತಿದ್ದಂತೆ ಬಿಲದಿಂದ ಹೊರಬಂದ ಬಿಜೆಪಿ ಶಾಸಕ – ಬೆಂಬಲಿಗರೊಂದಿಗೆ ಮಾಡಾಳ್ ಮೆರವಣಿಗೆ..!

ಅಧಿಕಾರದ ಅಮಲು, ದುಡ್ಡಿನ ದರ್ಪದ ಮುಂದೆ ಯಾವ ಕಾನೂನು ಲೆಕ್ಕಕ್ಕಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಲೋಕಾಯುಕ್ತ ಪೊಲೀಸರು ಹಗಲಿರುಳು ತಡಕಿ, ಊರೂರು ಜಾಲಾಡಿದ್ರೂ ಪತ್ತೆ ಆಗದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ 6 ದಿನಗಳಿಂದ ಇಲಿಯಂತೆ ಬಿಲ ಸೇರಿಕೊಂಡಿಡ್ರು. ಆದ್ರೆ ಇವತ್ತು ಹೈಕೋರ್ಟ್ ಮಧ್ಯಂತರ ಜಾಮೀನು ಆದೇಶ ನೀಡ್ತಿದ್ದಂತೆ ಬಿಲದಿಂದ ಹೊರಬಂದು ಹುಲಿಯಂತೆ ಪೋಸ್ ಕೊಟ್ಟಿದ್ದಾರೆ.

ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ಆದೇಶ ಹೊರಬೀಳ್ತಿದ್ದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ರು. ತಮ್ಮ ಬೆಂಬಲಿಗರನ್ನ ಸೇರಿಸಿಕೊಂಡು ಒಲಿಂಪಿಕ್ಸ್​ನಲ್ಲಿ ಗೋಲ್ಡ್ ಮೆಡಲ್ ಗೆದ್ದು ಬಂದಂತೆ ಬಿಲ್ಡಪ್ ತಗೊಂಡಿದ್ದಾರೆ. ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿ ಓಪನ್ ಕಾರು ಏರಿ ಹಾರ ಹಾಕ್ಕೊಂಡು ಹೂವಿನ ಮಳೆಯಲ್ಲಿ ಮೆರವಣಿಗೆ ಮಾಡಿದ್ದಾರೆ. ಇಷ್ಟು ದಿನ ಕಳ್ಳನಂತೆ ತಲೆಮರೆಸಿಕೊಂಡು ಬೇಲ್ ಸಿಗ್ತಿದ್ದಂತೆ ಬೆಕ್ಕಿನಂತೆ ಹೊರಬಂದಿದ್ದ ಶಾಸಕನಿಗೆ ತಮಟೆ ಬಾರಿಸಿ ಬೆಂಬಲಿಗರು ಕೂಡ ಪರಾಕ್ ಹಾಕಿದ್ದಾರೆ.

ಇದನ್ನೂ ಓದಿ : ಬಿಜೆಪಿ ಶಾಸಕನ ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರು ತನಿಖಾಧಿಕಾರಿಗಳ ಬದಲಾವಣೆ – ಅನುಮಾನ ಮೂಡಿದ್ದೇಕೆ..?

ಬಿಟ್ಟಿಯಾಗಿ ಬಿಲ್ಡಪ್ ತಗೊಳ್ತಿದ್ದ ಶಾಸಕರನ್ನ, ಏನ್ರೀ ಸ್ವಾಮಿ ಇಷ್ಟು ದಿನ ನಾಪತ್ತೆಯಾಗಿಬಿಟ್ಟಿದ್ರಲ್ಲ ಅಂತಾ ಮಾಧ್ಯಮದವ್ರು ಪ್ರಶ್ನಿಸಿದ್ರೆ ನಾನು ದೊಡ್ಡ ಸಾಚಾ ಅನ್ನೋ ಥರ ಮಾತಾಡಿದ್ದಾರೆ. ನಂದೇನು ತಪ್ಪೇ ಇಲ್ಲ. ಸಿಕ್ಕಿರೋ ದುಡ್ಡೆಲ್ಲಾ ನನ್ನದೇ. ಅಡಕೆ ತೋಟ, ಕ್ರಷರ್​​ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ರೇಡ್ ವೇಳೆ ಸಿಕ್ಕಿರುವ ಅಷ್ಟೂ ಹಣಕ್ಕೆ ನನ್ನತ್ರ ದಾಖಲೆ ಇದೆ. ಎಲ್ಲವನ್ನೂ ಒದಗಿಸುತ್ತೇನೆ ಎಂದಿದ್ದಾರೆ. ಮತ್ಯಾಕೆ ತಲೆಮರೆಸಿಕೊಂಡಿದ್ರಿ ಅಂತಾ ಕೇಳಿದ್ರೆ ನಾನು ಎಲ್ಲೂ ಓಡಿ ಹೋಗಿರಲಿಲ್ಲ ಊರಿನಲ್ಲೇ ಇದ್ದೆ. ನನ್ನ ಮೇಲೆ ಆಪಾದನೆ ಇದ್ದಿದ್ದರಿಂದ ನಾನು ಜನರ ಸಂಪರ್ಕಕ್ಕೆ ಬಂದಿರಲಿಲ್ಲ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಕಿವಿ ಮೇಲೆ ಹೂ ಇಡುವಂತೆ ಮಾತಾಡಿದ್ದಾರೆ. ಮಗನ ಕಚೇರಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ಕೇಳಿದ್ರೆ ಯಾರೋ ಇಬ್ಬರು ತಂದು ಇಟ್ಟು ಓಡಿ ಹೋಗಿದ್ದಾರೆ. ಬಳಿಕ ನನ್ನ ಮಗನ ಕೈಹಿಡಿದು ಹಣದ ಮೇಲಿರಿಸಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗ ಪ್ರಶಾಂತ್​ ಸುಮ್ಮನೆ ಕುಳಿತಿದ್ದನ್ನು ನಾನು ಗಮನಿಸಿದ್ದೇನೆ. ಯಾರೋ ಷಡ್ಯಂತ್ರ ನಡೆಸಿ ಲೋಕಾಯುಕ್ತ ದಾಳಿಗೆ ಸಿಲುಕಿಸಿದ್ದಾರೆ ಎಂದು ಪುಂಗಿ ಬಿಟ್ಟಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ 8 ಕೋಟಿ ಕ್ಯಾಶ್ ಮತ್ತು ಲೋಕಾಯುಕ್ತ ಸಲ್ಲಿಸಿದ ಎಫ್​ಐಆರ್ ನಲ್ಲಿ ಎ1 ಆಗಿದ್ರಿಂದ ವಿರೂಪಾಕ್ಷಪ್ಪರನ್ನ ಬಂಧಿಸೋಕೆ ಎಲ್ಲಾ ಚಾನ್ಸಸ್ ಕೂಡ ಇತ್ತು. ಆದ್ರೆ ರೇಡ್ ನಡೆದು 6 ದಿನ ಕಳೆದ್ರೂ ಶಾಸಕರನ್ನ ಬಂಧಿಸಲಿಲ್ಲ. ಇದು ಪೊಲೀಸರ ಫೇಲ್ಯೂರ್ ಅಂತಾನೂ ಹೇಳಬಹುದು. ಆದ್ರೆ ಈ ಹಿಂದೆ ಲಂಚ ಪ್ರಕರಣದಲ್ಲೇ ಶಾಸಕರೊಬ್ಬರಿಗೆ ಭ್ರಷ್ಟಾಚಾರ ಕಾಯ್ದೆಯಡಿ ಶಿಕ್ಷೆಯಾಗಿತ್ತು. 2009ರ ಜನವರಿ 29ರಂದು ವಿವಾದವೊಂದನ್ನು ಬಗೆಹರಿಸುವುದಾಗಿ ಕೋಲಾರ ಶಾಸಕರಾಗಿದ್ದ ವೈ. ಸಂಪಂಗಿ 50 ಸಾವಿರ ರೂಪಾಯಿ ನಗದು ಹಾಗೂ 4.5 ಲಕ್ಷ ರೂಪಾಯಿ ಚೆಕ್ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಮೂರು ವರ್ಷಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾಗಿತ್ತು. ಹೀಗಾಗಿ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಬಿಜೆಪಿ ಶಾಸಕ ವೈ.ಸಂಪಂಗಿಗೆ 2012ರಲ್ಲಿ ಮೂರುವರೆ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಅಲ್ಲದೆ, 40 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು.

ಆದ್ರೆ ಈಗ ಮಾಡಾಳ್ ವಿರೂಪಾಕ್ಷಪ್ಪ ವಿಚಾರದಲ್ಲಿ ನಿಸ್ಪಕ್ಷಪಾತ ತನಿಖೆ ನಡೆಯುತ್ತಾ ಅನ್ನೋದೇ ಅನುಮಾನ ಮೂಡಿಸಿದೆ. ಯಾಕಂದ್ರೆ ಪ್ರಕರಣದ ತನಿಖಾಧಿಕಾರಿಗಳಾಗಿದ್ದ DySP ಪ್ರಮೋದ್ ಕುಮಾರ್, ಇನ್ಸ್​​ಪೆಕ್ಟರ್ ಕುಮಾರಸ್ವಾಮಿಯವರನ್ನು ಬದಲಾವಣೆ ಮಾಡಲಾಗಿದೆ. ಇವರ ಬದಲಿಗೆ DySP ಆಂಥೋನಿ ಜಾನ್, ಇನ್ಸ್​​ಪೆಕ್ಟರ್ ಬಾಲಾಜಿ ಬಾಬು ಅವರನ್ನು ನೇಮಕ ಮಾಡಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿಗಳ ಬದಲಾವಣೆ ಮಾಡಿರೋದು ಸಾಕಷ್ಟು ಅನುಮಾನ ಮೂಡಿಸಿದೆ.

suddiyaana