ಬೆಂಗಳೂರಿಗೆ ಬಂದಿಳಿದ ನಾಲ್ವರು ವಿದೇಶಿಗರಲ್ಲಿ ಸೋಂಕು ಪತ್ತೆ – ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್
ಬೆಂಗಳೂರು : ರಾಜಧಾನಿ ಬೆಂಗಳೂರು ಹೊಸ ವರ್ಷಾಚರಣೆಯ ಸಿದ್ಧತೆಯಲ್ಲಿದೆ. ಇದರ ಮಧ್ಯೆ ರಾಜಧಾನಿಯಲ್ಲಿ ಕೋವಿಡ್ ಆತಂಕ ಇನ್ನಷ್ಟು ಹೆಚ್ಚಾಗಿದೆ. ಡಿಸೆಂಬರ್ 27ರಂದು ವಿದೇಶದಿಂದ ಬಂದಿದ್ದ 119 ಪ್ರಯಾಣಿಕರಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸದ್ಯ ನಾಲ್ವರು ಸೋಂಕಿತರಿಗೆ ವೈದ್ಯರು ಐಸೋಲೇಷನ್ ಮಾಡಿದ್ದು ಈ ಮೂಲಕ ವಿದೇಶದಿಂದ ಮರಳಿದ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿಗೆ ಕೊರೊನಾ ಸೋಂಕು – ಬಿಬಿಎಂಪಿ ಹೈ ಅಲರ್ಟ್
ಸದ್ಯ ರಾಜ್ಯದಲ್ಲಿ ಒಮಿಕ್ರಾನ್ ರೂಪಾಂತರಿ ತಳಿ BF.7 ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ. ಬೆಂಗಳೂರು ನಗರದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ, ಸಿ.ವಿ.ರಾಮನ್ನಗರ ಆಸ್ಪತ್ರೆ, ESI ಆಸ್ಪತ್ರೆ ಸೇರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಆಕ್ಸಿಜನ್ ಪೂರೈಕೆ, ಬೆಡ್ಗಳ ಸಿದ್ಧತೆ, ಔಷಧಗಳ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲು ಆರೋಗ್ಯ ಇಲಾಖೆ ಮುಂದಾಗಿದೆ.