ಮೋಚಾ ಚಂಡಮಾರುತ ಎಫೆಕ್ಟ್ – ರಾಜ್ಯದಲಿ ದೂರವಾಯ್ತು ಕಡಿಮೆ ಮಳೆಯ ಆತಂಕ!
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದು ಹೀಗೆ ಮುಂದುವರಿದರೆ ನೀರಿನ ಅಭಾವ ಹೆಚ್ಚಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಡಕು ಉಂಟಾಗುವ ಸಾಧ್ಯತೆ ಇದೆ ಎಂದು ರೈತರು ತಲೆಕೆಡೆಸಿಕೊಂಡಿದ್ದರು. ಆದರೆ ಇದೀಗ ರೈತರಿಗೆ ಹವಾಮಾನ ಇಲಾಖೆ ಖುಷಿ ಸುದ್ದಿ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಕೆಲವು ದಿನಗಳ ಹಿಂದೆ ರೂಪುಗೊಂಡ ‘ಮೋಚಾ’ ಚಂಡಮಾರುತದಿಂದ ಮುಂಗಾರು ಆರಂಭಕ್ಕೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಲಿದ್ದು, ನಿರೀಕ್ಷೆಯಂತೆ ರಾಜ್ಯದಲ್ಲಿ ಈ ಬಾರಿ ವಾಡಿಕೆ (ಉತ್ತಮ) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇನ್ನು ಮುಂದೆ ಆಫೀಸ್‌ನಲ್ಲೂ ಮದ್ಯಪಾನ ಮಾಡಬಹುದು!
ವಾರದ ಹಿಂದೆ ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ರೂಪುಗೊಂಡ ‘ಮೋಚಾ’ ಚಂಡಮಾರುತವು ಉತ್ತರ ದಿಕ್ಕಿನ ಕಡೆ ಚಲಿಸಿ ಬಾಂಗ್ಲಾದೇಶದಲ್ಲಿ ಕ್ಷೀಣಿಸಿದೆ. ಈ ಚಂಡಮಾರುತವು ಮುಂಗಾರು ಮಾರುತಗಳು ರೂಪುಗೊಳ್ಳುವುದಕ್ಕೆ ಉತ್ತಮ ವಾತಾವರಣ ನಿರ್ಮಿಸಲಿದೆ. ಹೀಗಾಗಿ, ನಿರೀಕ್ಷೆಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದ್ದು, ನಂತರ ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು, ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಮೂರು ವರ್ಷ ರಾಜ್ಯದಲ್ಲಿ ಉತ್ತಮ ಪ್ರಮಾಣದ ಮಳೆಯಾಗಿದ್ದು, ಈ ಬಾರಿಯೂ ಮುಂಗಾರು ಅವಧಿಯಲ್ಲಿ ನಿರೀಕ್ಷೆಯಂತೆ ಮಳೆಯಾಗಲಿದೆ. ಆದರೆ, ವಾಡಿಕೆ ಪ್ರಮಾಣದಲ್ಲಿ ಶೇ.90ರಷ್ಟುಮಳೆಯಾಗಲಿದೆ. ಈ ಪೈಕಿ ಸ್ವಲ್ಪ ಹೆಚ್ಚು ಮತ್ತು ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಉಂಟಾದಂತೆ ಪ್ರವಾಹ ಸೃಷ್ಟಿಯಾಗುವಂತಹ ಮಳೆ ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾರ್ಷಿಕವಾಗಿ ರಾಜ್ಯದಲ್ಲಿ ಸುರಿಯುವ ಮಳೆಯಲ್ಲಿ ಶೇ.70 ರಿಂದ 80ರಷ್ಟುಮಳೆ ಮುಂಗಾರು ಅವಧಿಯಲ್ಲಿ ಆಗುತ್ತದೆ. ಉಳಿದಂತೆ ಶೇ.20ರಷ್ಟುಮಳೆ ಹಿಂಗಾರು ಅವಧಿಯಲ್ಲಿ ಆಗುತ್ತದೆ. ಹೀಗಾಗಿ, ನೈಋುತ್ಯ ಮುಂಗಾರು ರಾಜ್ಯಕ್ಕೆ ಅತಿ ಮುಖ್ಯವಾಗಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಆದರೆ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಶೇ.50 ರಷ್ಟುಮಳೆ ಕೊರತೆ ಆಗಿದೆ. ಇನ್ನು ಉತ್ತರ ಒಳನಾಡಿನ ಧಾರವಾಡ (-3), ಗದಗ (-20) ಹಾಗೂ ಹಾವೇರಿಯಲ್ಲಿ (-50), ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ (-6), ಚಿಕ್ಕಮಗಳೂರು (-13), ಚಿತ್ರದುರ್ಗ (-23), ದಾವಣಗೆರೆ (-15) ಹಾಗೂ ಕೊಡಗಿನಲ್ಲಿ (-36) ಮಳೆ ಕೊರತೆ ಎದುರಾಗಿದೆ. ಇದರಿಂದ ಈ ಜಿಲ್ಲೆಗಳಲ್ಲಿ ಮುಂಗಾರು ಅವಧಿಯಲ್ಲಿ ಬಿತ್ತನೆಗೆ ತಯಾರಿಯಲ್ಲಿ ಹಿನ್ನಡೆ ಉಂಟಾಗಿದೆ.