ಶೌಚಾಲಯದಲ್ಲಿ ಫೋನ್‌ ಬಳಸುತ್ತೀರಾ? – ಎಚ್ಚರ.. ಮೂಲವ್ಯಾಧಿ ನಿಮ್ಮನ್ನ ಕಾಡಬಹುದು!

ಶೌಚಾಲಯದಲ್ಲಿ ಫೋನ್‌ ಬಳಸುತ್ತೀರಾ? – ಎಚ್ಚರ.. ಮೂಲವ್ಯಾಧಿ ನಿಮ್ಮನ್ನ ಕಾಡಬಹುದು!

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಎಲ್ಲರ ಜೀವನದ ಅವಿಭಾಜ್ಯ ಭಾಗವಾಗಿದೆ. ಮಲಗುವಾಗ, ಎದ್ದಾಗ, ಊಟ ಮಾಡುವಾಗ, ನಡೆಯುವಾಗ ಮಾತ್ರವಲ್ಲ, ಶೌಚಾಲಯದಲ್ಲಿಯೂ ಮೊಬೈಲ್ ಬಿಡದವರ ಸಂಖ್ಯೆ ಹೆಚ್ಚಾಗಿದೆ. ಕೆಲವರು ಕಮೋಡ್‌ನಲ್ಲಿ ಕುಳಿತು ಗಂಟೆಗಟ್ಟಲೆ ವೀಡಿಯೊ, ರೀಲ್‌ಗಳನ್ನು ನೋಡುತ್ತಲೇ ಕಾಲ ಕಳೆಯುತ್ತಾರೆ. ಆದರೆ ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧ್ಯಯನದಿಂದ ಗೊತ್ತಾಗಿದೆ.

ಇದನ್ನೂ ಓದಿ:  ಶುಗರ್‌ ನಿಯಂತ್ರಣಕ್ಕೆ ಈ ತರಕಾರಿ ಬೆಸ್ಟ್!‌ – ರಾತ್ರಿ ಊಟದ ಜೊತೆ ತೊಂಡೆಕಾಯಿ ತಿಂದ್ರೆ ಏನೆಲ್ಲಾ ಪ್ರಯೋಜನ?

ಬಾತ್ರೂಮ್‌ ಕಮೋಡ್‌ ಮೇಲೆ ಘಂಟೆಗಟ್ಟಲೆ ಕುಳಿತು ಮೊಬೈಲ್‌ ನೋಡುವ ಮೊದಲು ಎಚ್ಚರ.. ಏಕೆಂದರೆ ಈ ಹವ್ಯಾಸದಿಂದ ಅಪಾಯಕಾರಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಸ್ವತಃ ವೈದ್ಯರೇ ಸಂಶೋಧನೆಗಳ ಮೂಲಕ ತಿಳಿಸಿದ್ದಾರೆ. ಹೆಚ್ಚು ಹೊತ್ತು ಶೌಚಾಲಯಲ್ಲಿ ಕುಳಿತುಕೊಂಡ್ರೆ ಮೂಲವ್ಯಾಧಿ‌ ನಿಮ್ಮನ್ನ ಕಾಡಬಹುದು!

ಹಾರ್ವರ್ಡ್ ವೈದ್ಯಕೀಯ ಶಾಲೆಯೊಂದಿಗಿನ ಬೆತ್ ಇಸ್ರೇಲ್ ಡೀಕನೆಸ್ ಮೆಡಿಕಲ್ ಸೆಂಟರ್‌ನಲ್ಲಿ ನಡೆದ ಸಂಶೋಧನೆಯಲ್ಲಿ ಸುಮಾರು 125 ಮಂದಿ ಭಾಗವಹಿಸಿದ್ದರು. ಇವರಲ್ಲಿ 66% ಜನರು ಶೌಚಾಲಯದಲ್ಲಿ ಮೊಬೈಲ್ ಬಳಸುವ ಅಭ್ಯಾಸ ಹೊಂದಿದ್ದರು. ಫಲಿತಾಂಶಗಳು ಆಶ್ಚರ್ಯಕರವಾಗಿದ್ದು, ಶೌಚಾಲಯದಲ್ಲಿ ಮೊಬೈಲ್ ಬಳಸದವರಲ್ಲಿ 38% ಜನರಿಗೆ ಮಾತ್ರ ಮೂಲವ್ಯಾಧಿ ಕಂಡುಬಂದರೆ, ಮೊಬೈಲ್ ಬಳಸಿದವರಲ್ಲಿ 51% ಮಂದಿಗೆ ಈ ಸಮಸ್ಯೆ ಕಂಡುಬಂದಿದೆ. ವಯಸ್ಸು, ಲಿಂಗ, ದೇಹದ ತೂಕ, ವ್ಯಾಯಾಮ, ಶೌಚದ ಒತ್ತಡ ಮತ್ತು ಆಹಾರ ಪದ್ಧತಿಯನ್ನು ಪರಿಗಣಿಸಿದರೂ ಸಹ ಮೊಬೈಲ್ ಬಳಕೆಯೇ ಮೂಲವ್ಯಾಧಿ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬುದನ್ನು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಭ್ಯಾಸವೇ ಈ ಅಪಾಯದ ಪ್ರಮುಖ ಕಾರಣವಾಗಿದೆ. ದೇಹವು ನೆಲಕ್ಕೆ ಬೆಂಬಲವಿಲ್ಲದೆ ಹೆಚ್ಚು ಹೊತ್ತು ಕುಳಿತರೆ ಮೂಲವ್ಯಾಧಿ ಕುಶನ್‌ ಮೇಲೆ ಒತ್ತಡ ಹೆಚ್ಚುತ್ತದೆ. ಈ ಒತ್ತಡ ಕಾಲಾನಂತರದಲ್ಲಿ ಕುಶನ್‌ಗಳನ್ನು ಊದಿಕೊಳ್ಳುವಂತೆ ಮಾಡುತ್ತದೆ, ಇದು ನಿಧಾನವಾಗಿ ಮೂಲವ್ಯಾಧಿಯಾಗಿ ಮಾರ್ಪಡುತ್ತದೆ. ಸಂಶೋಧನೆಯ ಪ್ರಕಾರ ಶೌಚಾಲಯದಲ್ಲಿ ಜನರು ಪತ್ರಿಕೆ ಓದುವುದು, ಸಾಮಾಜಿಕ ಮಾಧ್ಯಮ ಬಳಸುವುದು ಸಾಮಾನ್ಯವಾದರೂ, ಸ್ಮಾರ್ಟ್‌ಫೋನ್ ಬಳಸುವವರು ಇತರರಿಗಿಂತ ಹೆಚ್ಚು ಹೊತ್ತು ಶೌಚಾಲಯದಲ್ಲಿ ಕಳೆಯುತ್ತಾರೆ. ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುವುದು ಅಪಾಯಕಾರಿ ಎಂದು ತಜ್ಷರು ಎಚ್ಚರಿಸಿದ್ದಾರೆ.

ನಾವು ತಿನ್ನುವಾಗ ನಮ್ಮ ಗಮನವೆಲ್ಲ ಮೊಬೈಲ್ ಮೇಲಿರುತ್ತೆ. ನಾವೆಷ್ಟು ಆಹಾರ ಸೇವನೆ ಮಾಡಿದ್ದೇವೆ, ನಮ್ಮ ಹೊಟ್ಟೆ ತುಂಬಿದ್ಯಾ ಅನ್ನೋದನ್ನೂ ನಾವು ಗಮನಿಸಲ್ಲ. ಅತಿಯಾಗಿ ತಿಂದ್ರೆ ಬೊಜ್ಜು ಬೆಳೆಯುತ್ತದೆ.  ಮೊಬೈಲ್ ನೋಡ್ತಾ ಊಟ ಮಾಡಿದ್ರೆ ಜಗಿದು ನುಂಗಲ್ಲ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಲ್ಲ. ಇದರಿಂದಾಗಿ ಅನೇಕ ರೋಗಗಳು ನಮ್ಮನು ಕಾಡಲು ಆರಂಭಿಸುತ್ತವೆ.

ಇನ್ನು ಅನೇಕರು ಶೌಚಾಲಯಕ್ಕೆ ಹೋದಾಗ್ಲೂ ಯೂಸ್ ಮಾಡ್ತಾರೆ. ಟಾಯ್ಲೆಟ್​ಗೆ ಫೋನ್​​ ತಗೊಂಡು ಹೋದ್ರೆ ಅಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಫೋನ್‌ನಲ್ಲಿ ಅಂಟಿಕೊಳ್ಳುತ್ತೆ. ಅಲ್ಲಿಂದ ನಿಮ್ಮ ಹಾಸಿಗೆ, ಅಡುಗೆಮನೆಗೆ ಬರುತ್ತೆ. ಇದರಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ‌ ಮೊಬೈಲ್ ಬಳಕೆ ವಿಚಾರದಲ್ಲೂ ಎಚ್ಚರವಿರಲಿ.

Shwetha M