ಮೊಬೈಲ್ ಕದ್ದ 15 ನಿಮಿಷದಲ್ಲಿ ಬ್ಯಾಂಕ್ ಬಾಲೆನ್ಸ್ ಝೀರೋ.. – ಪಾಸ್ ವರ್ಡ್ ಇಲ್ಲದೇ ಖದೀಮರು ಹಣ ಎಗರಿಸಿದ್ದು ಹೇಗೆ?
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ನಡೆಯುತ್ತಲೇ ಇದೆ. ತಮಗೆ ಅರಿವಿಲ್ಲದೇ ಖತರ್ನಾಕ್ ಖದೀಮರು ಎಲ್ಲಾ ಮಾಹಿತಿಗಳನ್ನು ಕದ್ದು ಹಣ ವಂಚನೆ ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮೊಬೈಲ್ ಕದ್ದ ಕೆಲವೇ ಹೊತ್ತಲ್ಲಿ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣ ಮಾಯ ಆಗಿದೆ.
ಏನಿದು ವಿಚಿತ್ರ ಘಟನೆ?
ಪಶ್ಚಿಮ ಬಂಗಾಳದ ಕೆಸ್ತೂಪುರ್ ಎಂಬಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಫೋನ್ ಕಳ್ಳರ ಪಾಲಾಗಿತ್ತು. ಶಂಕರ್ ಘೋಷ್ ಎಂಬುವರ ಮೊಬೈಲ್ ಜೇಬುಗಳ್ಳರು ಎಗರಿಸಿದ್ದರು. ಫೋನ್ ಕಳ್ಳತನ ಆದ ಕೆಲವೇ ನಿಮಿಷಕ್ಕೆ ಶಂಕರ್ ಘೋಷ್ ಅವರ ಬ್ಯಾಂಕ್ ಅಕೌಂಟ್‌ನಲ್ಲಿ ಇದ್ದ 42 ಸಾವಿರ ರೂ. ಹಣ ಕೂಡಾ ಕಳ್ಳರ ಪಾಲಾಗಿದೆ.
ಕಳ್ಳರು ಬ್ಯಾಂಕ್ ಅಕೌಂಟ್‌ನಿಂದ ಹಣ ಎಗರಿಸಿದ್ದು ಹೇಗೆ?
ಶಂಕರ್ ಘೋಷ್ ಅವರ ಕಳ್ಳತನವಾದ ಫೋನ್ ನಲ್ಲಿ ಆನ್‌ಲೈನ್ ಪೇಮೆಂಟ್ ಅಪ್ಲಿಕೇಷನ್ ಇತ್ತು. ಈ ಅಪ್ಲಿಕೇಷನ್‌ಗೆ ಬ್ಯಾಂಕ್ ಅಕೌಂಟ್‌ನ ಯುಪಿಐ ಐಡಿ ಲಿಂಕ್ ಆಗಿತ್ತು. ಹೀಗಾಗಿ, ಮೊಬೈಲ್ ಕದ್ದ ಕಳ್ಳರು ಯುಪಿಐ ಲಿಂಕ್ ಆಗಿದ್ದ ಅಕೌಂಟ್‌ನಲ್ಲಿ ಇದ್ದ ಹಣವನ್ನೂ ದೋಚಿದ್ದಾರೆ. ಆದರೆ ಕಳ್ಳರು ಪಾಸ್‌ವರ್ಡ್ ಇಲ್ಲದೇ ಹೇಗೆ ಹಣ ಎಗರಿಸಿದ್ದಾರೆ ಎಂಬುವುದು ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ರಸ್ತೆಯಲ್ಲಿ ಬಿದ್ದಿದ್ದ 10 ರೂಪಾಯಿ ನೋಟಿನ ಆಸೆಗೆ ಲಕ್ಷ ಕಳೆದುಕೊಂಡ ವ್ಯಕ್ತಿ! –ಯಾಮಾರಿಸಿದ ಖತರ್ನಾಕ್ ಕಳ್ಳ!
ಫೋನ್ ಕದ್ದ 15 ನಿಮಿಷದಲ್ಲೇ ಬ್ಯಾಂಕ್ ಬ್ಯಾಲೆನ್ಸ್ ಖಾಲಿ!
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಂಕರ್ ಘೋಷ್, ತಮ್ಮ ಮೊಬೈಲ್ ಹೇಗೆ ಕಳ್ಳತನವಾಯ್ತು ಎಂದು ವಿವರಿಸಿದ್ದಾರೆ. ‘ರಾತ್ರಿ ವೇಳೆ ಬೆಹಾಲಾ ಎಂಬ ಪ್ರದೇಶದಲ್ಲಿ ಇರುವ ಕಚೇರಿಯಿಂದ ನಾನು ಮನೆಗೆ ಹೋಗುತ್ತಿದ್ದೆ. ಈ ವೇಳೆ ಕಿಟಕಿ ಪಕ್ಕದ ಸೀಟ್‌ನಲ್ಲಿ ನಾನು ಕುಳಿತಿದ್ದೆ. ಮೊಬೈಲ್‌ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದೆ. ಈ ವೇಳೆ ಬಸ್‌ನ ಹೊರಗೆ ಕಿಟಕಿ ಪಕ್ಕ ನಿಂತಿದ್ದ ಕಳ್ಳನೊಬ್ಬ ಏಕಾಏಕಿ ನನ್ನ ಮೊಬೈಲ್ ಕಿತ್ತುಕೊಂಡ. ನಾನು ಕೂಗಿಕೊಳ್ಳುವಷ್ಟರಲ್ಲಿ ಆತ ಓಡಿ ಹೋಗಿದ್ದ. ಇದಾದ 15 ನಿಮಿಷದಲ್ಲೇ ನನ್ನ ಬ್ಯಾಂಕ್ ಖಾತೆಯಿಂದ 42 ಸಾವಿರ ರೂ. ಹಣವನ್ನು ಕಳ್ಳರು ಎಗರಿಸಿದ್ದರು’ ಎಂದು ಶಂಕರ್ ಘೋಷ್ ಹೇಳಿದ್ಧಾರೆ.
ಶಂಕರ್ ಘೋಷ್ ಅವರನ್ನು ಮತ್ತೊಂದು ಮೊಬೈಲ್ ಫೋನ್ ಹಾಗೂ ಹೊಸ ಸಿಮ್ ಖರೀದಿ ಮಾಡಿದ ಬಳಿಕವಷ್ಟೇ ಅವರಿಗೆ ತಮ್ಮ ಖಾತೆಯಿಂದ ಹಣ ಖಾಲಿಯಾಗಿರುವ ಮಾಹಿತಿ ಸಿಕ್ಕಿದೆ. ತಮ್ಮ ಫೋನ್ ಕಳ್ಳತನ ಆದ 15 ನಿಮಿಷದಲ್ಲೇ ಹಣ ಎಗರಿಸಿದ್ದಾರೆ ಎಂದು ಶಂಕರ್ ತಿಳಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ದಾಖಲು!
ಇದೀಗ ಶಂಕರ್ ಘೋಷ್ ಈ ಪ್ರಕರಣ ಸಂಬಂಧ ಎರಡು ಪ್ರತ್ಯೇಕ ದೂರುಗಳನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಒಂದು ಪ್ರಕರಣವನ್ನು ಅಲಿಪೋರ್ ಪೊಲೀಸ್ ಠಾಣೆಯಲ್ಲಿ ತಮ್ಮ ಮೊಬೈಲ್ ಕಳ್ಳತನ ಆಗಿದೆ ಎಂದು ದಾಖಲಿಸಿದ್ದರೆ, ಮತ್ತೊಂದು ಪ್ರಕರಣವನ್ನು ಸೈಬರ್ ಕ್ರೈಂ ಪೊಲೀಸರ ಬಳಿ ದಾಖಲಿಸಿದ್ದು, ಈ ದೂರಿನಲ್ಲಿ ತಮ್ಮ ಖಾತೆಯಿಂದ ಹಣ ಲೂಟಿ ಮಾಡಿದ ಕುರಿತಾಗಿ ವಿವರಿಸಿದ್ದಾರೆ.
ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ಧಾರೆ. ಶಂಕರ್ ಘೋಷ್ ಅವರ ಮೊಬೈಲ್ ಕದ್ದು ಓಡಿ ಹೋದ ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.
ಯುಪಿಐ ಆಪ್ನಲ್ಲಿ ಯಾವುದೇ ಲೋಪವಿಲ್ಲ!
ಇನ್ನು ಬ್ಯಾಂಕ್ ಸಿಬ್ಬಂದಿ ಕೂಡಾ ಈ ಪ್ರಕರಣದ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ. ಅವರ ಪ್ರಕಾರ ಯುಪಿಐ ಆಪ್ನಲ್ಲಿ ಯಾವುದೇ ಲೋಪವಾಗಿಲ್ಲ. ಸಾಮಾನ್ಯವಾಗಿ ಆಪ್ ತೆರೆದು ಪಾಸ್ ವರ್ಡ್, ಪಿನ್ ಹಾಕಿದ ರೀತಿಯಲ್ಲೇ ವಹಿವಾಟು ನಡೆದಿದೆ. ಬ್ಯಾಂಕ್ ಸಿಬ್ಬಂದಿ ಪ್ರಕಾರ ಪಾಸ್ ವರ್ಡ್ ಗೊತ್ತಿರುವವರೇ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿರುವ ಪೊಲೀಸರು. ಈ ರೀತಿಯ ಪ್ರಕರಣಗಳು ಕೇವಲ ಮೊಬೈಲ್ ಕಳ್ಳತನಕ್ಕಷ್ಟೇ ಸೀಮಿತ ಆಗಿರೋದಿಲ್ಲ ಎಂದು ಎಚ್ಚರಿಸಿದ್ದಾರೆ. ನಿಮ್ಮ ಯುಪಿಐ ಖಾತೆಗಳ ಬಗ್ಗೆಯೂ ನಿಗಾ ವಹಿಸಿ ಎಂದು ಹೇಳಿದ್ಧಾರೆ.