ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಆಯ್ಕೆ – ವಿಧಾನಸಭೆಯ ಕಲಾಪದಲ್ಲಿ ಸದಸ್ಯರ ಅಭಿನಂದನೆ

ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಕಾಂಗ್ರೆಸ್‌ನ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಆಯ್ಕೆ – ವಿಧಾನಸಭೆಯ ಕಲಾಪದಲ್ಲಿ ಸದಸ್ಯರ ಅಭಿನಂದನೆ

ಬೆಳಗಾವಿ:  ವಿಧಾನಸಭೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಈ ಬಾರಿ ಕಾಂಗ್ರೆಸ್‌ನ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ. ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.  ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭೆಯ ಸ್ಪೀಕರ್‌ ಆದ ಮೇಲೆ ವಿಧಾನಸಭೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.  ವಿಧಾನಸಭೆಯ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡಿ ಗೌರವಿಸಲಾಗಿತ್ತು. ಈಗ ಎರಡನೇ ಪ್ರಶಸ್ತಿಗೆ ಆರ್‌.ವಿ.ದೇಶಪಾಂಡೆಯವರನ್ನು ಸ್ಪೀಕರ್‌ ಕಾಗೇರಿ ಆಯ್ಕೆ ಮಾಡಿದ್ದಾರೆ.

ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆಯಾದ ಆರ್‌.ವಿ.ದೇಶಪಾಂಡೆಯವರಿಗೆ ವಿಧಾನಸಭೆಯ ಕಲಾಪದಲ್ಲಿ ಅಭಿನಂದನೆ ಸಲ್ಲಿಸಲಾಯ್ತು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿಧಾನಸಭೆಯ ಎಲ್ಲಾ ಸದಸ್ಯರು ಪಕ್ಷಬೇಧ ಮರೆತು ಆರ್‌.ವಿ.ದೇಶಪಾಂಡೆಯವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಉತ್ತಮ ಭಾಂದವ್ಯಕ್ಕೆ ಸಾಕ್ಷಿಯಾದರು. ಅದರಲ್ಲೂ ಪ್ರತಿಪಕ್ಷ ನಾಯಕರ ಮಾತಿಗೆ ವಿಧಾನಸಭೆಯಲ್ಲಿ ತಿಳಿಹಾಸ್ಯದ ವಾತಾವರಣ ನಿರ್ಮಾಣಯಾಯ್ತು.

ಇದನ್ನೂ ಓದಿ:  ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಸ್ತ್ರಸಂಹಿತೆ ನೀತಿ ಜಾರಿ ಮಾಡಿ – ಅಭಿಯಾನಕ್ಕೆ ಪ್ರತಾಪ್ ಸಿಂಹ ಬೆಂಬಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಆರ್.ವಿ. ದೇಶಪಾಂಡೆಗೆ ಅಭಿನಂದನೆ ಸಲ್ಲಿಸಿದರು. ನನಗಿಂತ ವಯಸ್ಸಲ್ಲಿ ಐದು ತಿಂಗಳಿಗಿಂತ ದೊಡ್ಡವರು. ನನಗಿಂತ ವಯಸ್ಸಾದಂತೆ ಕಾಣಿಸ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಶಾಸಕ ಕೃಷ್ಣಬೈರೇಗೌಡ ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದ್ರು. ಬರ್ತ್‌ ಸರ್ಟಿಫಿಕೇಟ್‌ನಲ್ಲಿ ಏನೋ ಇರಬೇಕು ಅಂದ್ರು. ಆಗ ನಗುತ್ತಾ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಇದಕ್ಕೊಂದು ತನಿಖೆ ನಡೆಸಬೇಕು ಎಂದರು. ಆಗ ಸದನ ಸಮಿತಿ ಮಾಡಿ ತನಿಖೆ ನಡೆಸುವಾ ಎಂದು ಸಿದ್ದರಾಮಯ್ಯ ಅವರ ಮಾತಿಗೆ ಸಭಾಧ್ಯಕ್ಷರು ಕೂಡಾ ದನಿಗೂಡಿಸಿದಾಗ ಎಲ್ಲರೂ ನಗೆಗಡಲಲ್ಲಿ ತೇಲಾಡಿದರು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಸಿದ್ದರಾಮಯ್ಯ ಅವ್ರನ್ನು ಸಿದ್ರಾಮಣ್ಣ ಅಂತಾ ಸಂಭೋಧಿಸಿದರು. ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯ, ದೇಶಪಾಂಡೆಯವರು, ದಣಿವಿರದೇ ಕೆಲಸ ಮಾಡುವ ವ್ಯಕ್ತಿ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಜನಪರ ಆಲೋಚನೆಯಿಂದ ಕೆಲಸ ಮಾಡ್ತಾರೆ. ಬೇರೆಯವರಿಗೆ ಆದರ್ಶವಾಗಿರುವಂತಾ ಶಾಸಕ ಎಂದರು. ಹಾಗೇ ಮಾತು ಮುಂದುವರೆಸಿ ಈ ಬಾರಿ ಯಡಿಯೂರಪ್ಪನವರು ಎಲೆಕ್ಷನ್‌ಗೆ ನಿಲ್ಲಲ್ಲ. ನಾನು ನಿಲ್ತೀನಿ. ನೀನು ಮಾತ್ರ ನಿವೃತ್ತಿ ತಗೋಬೇಡಪ್ಪಾ ಎಂದು ದೇಶಪಾಂಡೆಯವರಿಗೆ ಹೇಳಿದರು. ನನಗೆ ನೀನು ಸಾಥ್ ನೀಡಬೇಕು ಎಂದು ಪ್ರೀತಿಯಿಂದ ದೇಶಪಾಂಡೆಯವರಿಗೆ ಹೇಳಿದರು. ಆಗ ಸಿಎಂ ಬಸವರಾಜ ಬೊಮ್ಮಾಯಿಯವರು, ಯಡಿಯೂರಪ್ಪ ಅವರು ತಮ್ಮ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ನಿವೃತ್ತಿ ಅನ್ನೋದು ಅವರಿಗಿಲ್ಲ ಅಂದರು.

ಇನ್ನು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಪಾತ್ರರಾದ ಆರ್.ವಿ. ದೇಶಪಾಂಡೆ ಸಭೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

1983ರಲ್ಲಿ ಮೊದಲ ಬಾರಿಗೆ ಆರ್‌.ವಿ.ದೇಶಪಾಂಡೆ ವಿಧಾನಸಭೆಗೆ ಜನತಾ ಪಕ್ಷದ ಶಾಸಕರಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇದಾದ ನಂತರ ಜನತಾ ದಳ ಸರ್ಕಾರದಲ್ಲಿ ಬೃಹತ್‌ ಕೈಗಾರಿಕಾ ಸಚಿವರಾಗಿದ್ದ ಆರ್‌.ವಿ.ದೇಶಪಾಂಡೆ, 1999ರ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ಸೋಲು ಅನುಭವಿಸಿದ್ದ ಆರ್‌.ವಿ.ದೇಶಪಾಂಡೆ, 2013 ಹಾಗೂ 2018ರ ಚುನಾವಣೆಗಳಲ್ಲಿ ಸತತವಾಗಿ ಹಳಿಯಾಳ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದಿರುವ ಆರ್‌.ವಿ.ದೇಶಪಾಂಡೆ, ರಾಜ್ಯದ ಕೈಗಾರಿಕಾ ಸಚಿವರಾಗಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

suddiyaana