ಮಿಜೋರಾಂನಲ್ಲಿ ತಲೆಕೆಳಗಾದ ಚುನಾವಣಾ ಸಮೀಕ್ಷೆ – ಪ್ರಾದೇಶಿಕ ಪಕ್ಷ ZPMಗೆ ಭರ್ಜರಿ ಗೆಲುವು!
ಮಿಜೋರಾಂ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 40 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) 27 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಆಡಳಿತ ರೂಢ ಎಂಎನ್‌ಎಫ್ ಅನ್ನು ಸೋಲಿಸಿದೆ.
ಮಿಜೋರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದೆ. ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ 27 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜನಾದೇಶ ಪಡೆದಿದೆ. ಮೀಜೋರಾಂನಲ್ಲಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವು 10 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2 ಕ್ಷೇತ್ರಗಳಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ.
ಇದನ್ನೂ ಓದಿ: ಗಾಜಾಗೆ ವಿಶ್ವಸಂಸ್ಥೆಯಿಂದ ಪೂರೈಕೆಯಾಗುತ್ತಿದ್ದ ಬಾಕ್ಸ್ ನಲ್ಲಿ ರಾಕೆಟ್ ಪತ್ತೆ – ಐಡಿಎಫ್ ಗಂಭೀರ ಆರೋಪ
ಎಂಎನ್‌ಎಫ್ ಹಾಗೂ ಝಡ್‌ಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 13 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನ ಹಾಕಿತ್ತು. ಮಿಜೋರಾಂನಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ (ಎಎಪಿ) 4 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಿತ್ತು. 17 ಮಂದಿ ಪಕ್ಷೇತರರು ಪ್ರತಿನಿಧಿಸಿದ್ದರು.
ಹೊಸದಾಗಿ ಸ್ಥಾಪನೆಗೊಂಡಿದ್ದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ 2018ರ ಚುನಾವಣೆಯಲ್ಲಿ ಕೇವಲ 8 ಸ್ಥಾನ ಗೆದ್ದಿತ್ತು. MNF 26 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದ್ರೆ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ತನ್ನ 2ನೇ ಅವಧಿಯ ಚುನಾವಣೆಯಲ್ಲೇ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವುದು ವಿಶೇಷ.
ಒಟ್ಟಿನಲ್ಲಿ ಪಂಚರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೆ, ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷವಾದ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಜನಾದೇಶ ಪಡೆದಿದೆ.