1.3 ಲಕ್ಷ ಮೌಲ್ಯದ ಗಿಳಿ ಪಂಜರದಿಂದ ಪರಾರಿ.. – ಗಿಳಿ ಪತ್ತೆಗೆ ಹೊರಟ ಪೊಲೀಸರಿಗೆ ಗೊತ್ತಾಗಿದ್ದು ಅಸಲಿ ಕಹಾನಿ!
ಆತ ಲಕ್ಷಾಂತರ ರೂಪಾಯಿ ಮೌಲ್ಯ ಆಸ್ಟ್ರೇಲಿಯಾ ಮೂಲದ ಗಿಳಿಯೊಂದನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದ. ಗಲಾ ಕೊಕಾಟೂ ಅನ್ನೋ ಅಪರೂಪದ ತಳಿಯ ಗಿಳಿ ಅದು. ಮನೆಗೆ ತಂದು ಮಗನಂತೆ ಸಾಕಿದ್ದ ಗಿಳಿ ಏಕಾಏಕಿ ಪರಾರಿಯಾಗಿದೆ. ಗಿಳಿ ಹಾರಿಹೋಗಿದ್ದರಿಂದ ಕಂಗಾಲಾಗಿದ್ದ ಆತ ಪೊಲೀಸರ ಮೊರೆ ಹೋಗಿದ್ದಾನೆ. ತನ್ನ ಮುದ್ದಿನ ಗಿಳಿಯನ್ನು ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ.
ಏನಿದು ಘಟನೆ?
ಹೈದರಾಬಾದ್ನ ಪ್ರತಿಷ್ಠಿತ ಜ್ಯೂಬಿಲಿ ಹಿಲ್ಸ್ ಎಂಬಲ್ಲಿನ ಪಕ್ಷಿ ಪ್ರೇಮಿ ನರೇಂದ್ರ ಚಾರಿ ಎಂಬುವವರು ಕಳೆದ ಮೂರು ತಿಂಗಳ ಹಿಂದೆ ಆಸ್ಟ್ರೇಲಿಯಾ ಮೂಲದ ಗಿಳಿ ಯೊಂದನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಗಲಾ ಕೊಕಾಟೂ ಅನ್ನೋ ಅಪರೂಪದ ತಳಿಯ ಗಿಳಿ ಅದು. ಬರೋಬ್ಬರಿ 1.3 ಲಕ್ಷ ರೂಪಾಯಿ ನೀಡಿ ಆ ಗಿಳಿಯನ್ನು ಹೈದರಬಾದ್ನ ತಮ್ಮ ಮನೆಗೆ ತರಿಸಿದ್ದರು. ಆದರೆ, ಸೆಪ್ಟೆಂಬರ್ 22ರಂದು ಗಿಳಿ ಪಂಜರದಿಂದ ಪರಾರಿಯಾಗಿತ್ತು.
ಗಿಳಿಯು ಪಂಜರದೊಳಿಲ್ಲ ಎಂದು ಮಾಲೀಕ ಕಂಗಾಲು!
ಪಕ್ಷಿ ಪ್ರೇಮಿ ನರೇಂದ್ರ ಅವರ ಮನೆಯಿಂದ ಈ ಗಿಳಿ ಪರಾರಿಯಾಗಿತ್ತು. ಇಡೀ ದಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಿಳಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದ್ರೆ ಗಿಳಿರಾಮ ಸಿಗಲೇ ಇಲ್ಲ. ಹೀಗಾಗಿ, ಸೆಪ್ಟೆಂಬರ್ 24 ರಂದು ತನ್ನ ಗಿಳಿ ಕಳೆದು ಹೋಗಿದೆ ಎಂದು ಗಿಳಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು. ಮನುಷ್ಯ ನಾಪತ್ತೆಯಾದರೇ ಹುಡುಕೋದು ಕಷ್ಟ, ಅಂತಾದ್ರಲ್ಲಿ ಗಿಳಿಯನ್ನು ಎಲ್ಲಿ ತಾನೇ ಹುಡುಕ್ತಾರೆ ಅಂತಾ ಗಿಳಿ ಮಾಲೀಕರೂ ಕೂಡಾ ಭಾವಿಸಿದ್ದರು. ತಮ್ಮ ಗಿಳಿ ವಾಪಸ್ ಬರೋದಿಲ್ಲ ಎಂದೇ ಆಸೆ ಕೈ ಬಿಟ್ಟಿದ್ದರು.
ಇದನ್ನೂ ಓದಿ: ಮಗನನ್ನು ಕೊಂದು ಅಡುಗೆ ಮಾಡಿದ್ಲು..! – ಕರುಳ ಕುಡಿ ಎಂದು ನೋಡದೆ ತಿಂದೇ ಬಿಟ್ಲು ಪಾಪಿ ತಾಯಿ!
ಮೂರೇ ದಿನದಲ್ಲಿ ಗಿಳಿಯನ್ನು ಪತ್ತೆ ಹಚ್ಚಿದ ಪೊಲೀಸರು!
ಗಿಳಿಯ ಫೋಟೋ ಸಮೇತ ಜ್ಯೂಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ನರೇಂದ್ರ ಚಾರಿ ಅವರಿಗೆ ತಮ್ಮ ಗಿಳಿ ವಾಪಸ್ ಸಿಗಬಹುದು ಎಂಬ ಯಾವುದೇ ನಂಬಿಕೆ ಇರಲಿಲ್ಲ. ಆದರೆ ಜ್ಯೂಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಸಿಬ್ಬಂದಿ ಗಿಳಿ ಮಾಲೀಕ ನರೇಂದ್ರ ಚಾರಿ ಅವರಿಗೆ ಅಚ್ಚರಿ ಮೂಡಿಸಿದ್ದಾರೆ. ಗಿಳಿ ನಾಪತ್ತೆಯಾದ ಮೂರೇ ದಿನಕ್ಕೆ ಅದನ್ನು ಪತ್ತೆ ಮಾಡಿದ್ದಾರೆ. ಬಳಿಕ ನರೇಂದ್ರ ಅವರಿಗೆ ಗಿಳಿಯನ್ನು ಪೊಲೀಸರು ಒಪ್ಪಿಸಿದ್ದಾರೆ. ಜ್ಯೂಬಿಲಿ ಹಿಲ್ಸ್ನ ರಸ್ತೆ ನಂಬರ್ 44ರಲ್ಲಿ ವಾಸವಾಗಿದ್ದ ಉದ್ಯಮಿ ನರೇಂದ್ರ ಚಾರಿ, ತಮ್ಮ ಗಿಳಿ ವಾಪಸ್ ಬಂದ ಖುಷಿಯ ಜೊತೆಯಲ್ಲೇ ಪೊಲೀಸರ ಕಾರ್ಯ ಕ್ಷಮತೆಯನ್ನು ಕೊಂಡಾಡಿದ್ದಾರೆ.
ಗಿಳಿಯ ಅಸಲಿ ವಿಚಾರ ಪೊಲೀಸರಿಂದ ಬಯಲು!
ಗಿಳಿ ನಾಪತ್ತೆ ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಮಾರನೇ ದಿನವೇ ಈ ಕುರಿತಾಗಿ ಸುಳಿವು ಸಿಕ್ಕಿದೆ. ಸಾಕು ಪ್ರಾಣಿಗಳ ಮಾರಾಟಗಾರ ಸೈಯದ್ ಮುಜಾಹಿದ್ ಎಂಬಾತ ಈ ಕುರಿತಾಗಿ ಪೊಲೀಸರಿಗೆ ಸುಳಿವು ನೀಡಿದ್ದ. ವ್ಯಕ್ತಿಯೊಬ್ಬ ತನ್ನ ಬಳಿ ಗಲಾ ಕೊಕಾಟೂ ತಳಿಯ ಗಿಳಿ ಇದೆ ಎಂದು ವಾಟ್ಸಪ್ ಸ್ಟೇಟಸ್ನಲ್ಲಿ ಫೋಟೋ ಸಮೇತ ಮಾಹಿತಿ ನೀಡಿದ್ದ. ಈ ಗಿಳಿಯ ಬೆಲೆ 70 ಸಾವಿರ ರೂ. ಎಂದು ಬರೆದುಕೊಂಡಿದ್ದ. ಹೀಗಾಗಿ, ನಾನು ಚೌಕಾಸಿ ಮಾಡಿ 50 ಸಾವಿರ ರೂ.ಗೆ ಗಿಳಿಯನ್ನು ಖರೀದಿ ಮಾಡಿದ್ದೆ ಎಂದು ಸೈಯದ್ ಮುಜಾಹಿದ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಆದರೆ, ಇದು ಕದ್ದ ಗಿಳಿ ಅನ್ನೋದು ಸೈಯದ್ ಮುಜಾಹಿದ್ಗೆ ಗೊತ್ತಿರಲಿಲ್ಲ. ಏಕೆಂದರೆ ಸೈಯದ್ಗೆ ಗಿಳಿ ಮಾರಿದ ವ್ಯಕ್ತಿಯು ತಾನು ಬೇರೊಬ್ಬರಿಂದ 30 ಸಾವಿರಕ್ಕೆ ಖರೀದಿ ಮಾಡಿದ್ದೆ ಎಂದು ಸುಳ್ಳು ಹೇಳಿದ್ದನಂತೆ. ಬಳಿಕ ಸೈಯದ್ ಬಳಿ ಇದ್ದ ಗಿಳಿಯನ್ನು ನರೇಂದ್ರ ಚಾರಿ ಅವರಿಗೆ ಮರಳಿ ಒಪ್ಪಿಸಿದ ಪೊಲೀಸರು, ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.