ಭೂಕಂಪದಲ್ಲಿ ಸಾವನ್ನೇ ಗೆದ್ದ ಮಗು 54 ದಿನಗಳ ಬಳಿಕ ಅಮ್ಮನ ಮಡಿಲಿಗೆ
ಟರ್ಕಿ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿಯೂ ಪವಾಡಸದೃಶವಾಗಿ ಬದುಕುಳಿದಿದ್ದ ಮಗು
ಟರ್ಕಿ: ಕಳೆದ ಫೆಬ್ರವರಿಯಲ್ಲಿ ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಘಡದಲ್ಲಿ ಸುಮಾರು 128 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಗುವೊಂದನ್ನು ರಕ್ಷಣಾ ತಂಡ ಕಾರ್ಯಾಚರಣೆ ಮಾಡಿ ರಕ್ಷಿಸಿತ್ತು. ಅಷ್ಟು ಹೊತ್ತಿನ ಕಾಲ ಅದು ಅವಶೇಷಗಳ ಅಡಿಯಲ್ಲಿ ಸಿಲುಕಿಯೂ ಬದುಕುಳಿದದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಮಾತ್ರವಲ್ಲದೆ ಅದೊಂದು ಪವಾಡ ಎಂದೇ ಬಣ್ಣಿಸಲ್ಪಟ್ಟಿತ್ತು. ಇದೀಗ ಈ ಮಗು ಹೆತ್ತಮ್ಮನ ಮಡಿಲು ಸೇರಿದೆ.
ಇದನ್ನೂ ಓದಿ: ಟರ್ಕಿ ಭೂಕಂಪದಲ್ಲಿ ಭಾರತೀಯ ಬಲಿ – 166 ಗಂಟೆಗಳ ಬಳಿಕ ಬದುಕಿ ಬಂದ ಮತ್ತೊಬ್ಬನ ಕಥೆ ಎಂಥಾದ್ದು..!?
ಹೌದು, ಟರ್ಕಿಯಲ್ಲಿ ನಡೆದ ಭೂಕಂಪದ ವೇಳೆ ಸುಮಾರು 128 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಸಿಲುಕಿ, ಪವಾಡದಂತೆ ಮಗು ಬದುಕುಳಿದಿತ್ತು. ಇದಾದ ನಂತರ ರಕ್ಷಣಾ ಸಿಬ್ಬಂದಿ ಮಗುವನ್ನು ರಕ್ಷಿಸಿ ‘ಆಯಾ’ಅಂತಾ ನಾಮಕರಣ ಮಾಡಲಾಗಿತ್ತು. ಈ ಮಗುವಿನ ತಾಯಿ ಮೃತಪಟ್ಟಿರಬಹುದು ಅಂತಾ ಊಹಿಸಲಾಗಿತ್ತು. ಇದೀಗ ಈ ಮಗುವಿನ ಹೆತ್ತಮ್ಮ ಬದುಕುಳಿದಿದ್ದಾರೆ. ಅಷ್ಟೇ ಅಲ್ಲದೇ ಆ ಹೆಣ್ಣು ಮಗು ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದೆ.
ಟರ್ಕಿ ರಿಪಬ್ಲಿಕ್ ನ ಕುಟುಂಬ ಮತ್ತು ಸಮಾಜ ಸೇವಾ ಸಚಿವ ಡೇರ್ಯಾ ಯಾನಿಕ್ ಅರು ಈ ಪುಟಾಣಿ ಕಂದನ ಬಗ್ಗೆ ಟರ್ಕೀಶ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ. ‘ಅಂತೂ 54 ದಿನಗಳ ಕಾಯುವಿಕೆ ಅಂತ್ಯವಾಗಿದೆ. 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಮಗುವನ್ನು ನಮ್ಮ ತಂಡ ರಕ್ಷಿಸಿತ್ತು. ಇದೀಗ ಈ ಮಗು ಹೆತ್ತ ತಾಯಿ ಮಡಿಲು ಸೇರಿದೆ ಅಂತಾ ಹೇಳಿದ್ದಾರೆ.
ಈ ಬಗ್ಗೆ ಉಕ್ರೈನ್ ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರರಾಗಿರುವ ಆ್ಯಂಟೊನ್ ಗೆರಾಶ್ಚೆಂಕೋ ಅವರು ಸಹ ಟ್ವೀಟ್ ಮಾಡಿದ್ದಾರೆ. “ಟರ್ಕಿಯಲ್ಲಿ ಭೂಕಂಪವಾದ ವೇಳೆ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಈ ಮಗು ನಿಮಗೆ ನೆನಪಿರಬಹುದು. ಆ ಮಗುವಿನ ತಾಯಿ ಮೃತಪಟ್ಟಿರಬಹುದೆಂದೇ ಭಾವಿಸಲಾಗಿತ್ತು. ಆದರೆ ಆಕೆ ಬದುಕಿದ್ದಾರೆ ಎಂದು ತಿಳಿದು ಬಂದಿದೆ. ಅವರು ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಡಿಎನ್ ಎ ಟೆಸ್ಟಿನಲ್ಲಿ ಅವರೇ ಮಗುವಿನ ತಾಯಿ ಎಂಬುದು ದೃಢಪಟ್ಟಿದ್ದು ಒಟ್ಟಾರೆ 54 ದಿನಗಳ ಕಾಯುವಿಕೆ ಕೊನೆಗೊಂಡಿದೆ ಎಂದು ಬರೆದಿದ್ದಾರೆ.