ತಾನು ಮುಳುಗಿದರೂ ಭಕ್ತನನ್ನು ಉಳಿಸಿದ ಗಣೇಶ! – ಸಮುದ್ರದಲ್ಲಿ ಕಣ್ಮರೆಯಾಗಿದ್ದ ಬಾಲಕ 36 ಗಂಟೆಗಳ ಬಳಿಕ ಪ್ರತ್ಯಕ್ಷ!

ತಾನು ಮುಳುಗಿದರೂ ಭಕ್ತನನ್ನು ಉಳಿಸಿದ ಗಣೇಶ! – ಸಮುದ್ರದಲ್ಲಿ ಕಣ್ಮರೆಯಾಗಿದ್ದ ಬಾಲಕ 36 ಗಂಟೆಗಳ ಬಳಿಕ ಪ್ರತ್ಯಕ್ಷ!

ಎಂತಹ ಕೆಟ್ಟ ಪರಿಸ್ಥಿತಿಯಲ್ಲೂ ತಾವು ನಂಬಿದ ದೇವರು ನಮ್ಮ ಕೈಬಿಡಲ್ಲ ಅನ್ನೋ ಮಾತಿದೆ. ಈ ಮಾತಿಗೆ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ನಡೆದಿದೆ. ಗಣಪತಿ ವಿಸರ್ಜನೆ ನೋಡಲು ತೆರಳಿದ್ದ 13 ವರ್ಷದ ಬಾಲಕ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ. ಕಾಣೆಯಾದ ಸುಮಾರು 36 ಗಂಟೆಗಳ ಬಳಿಕ ಬಾಲಕ ಜೀವಂತವಾಗಿ ಪತ್ತೆಯಾಗಿದ್ದಾನೆ.

ಏನಿದು ಘಟನೆ?

ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ಸಂಭವಿಸಿದೆ. ಕಳೆದ ಶುಕ್ರವಾರ ಸೂರತ್‌ನ ನಿವಾಸಿ ಲಖನ್ ದೇವಿಪೂಜಕ್ ಎಂಬ 13 ವರ್ಷದ ಬಾಲಕ ತನ್ನ ಅಜ್ಜಿ ಮತ್ತು ಒಡಹುಟ್ಟಿದವರ ಜತೆ ಬೀಚ್‌ನಲ್ಲಿ ಗಣೇಶ ವಿಸರ್ಜನೆಯನ್ನು ವೀಕ್ಷಿಸಲು ತೆರಳಿದ್ದ. ಅಲ್ಲಿದ್ದಾಗ, ಅವನು ಮತ್ತು ಅವನ ಸಹೋದರ ಈಜಲು ಸಮುದ್ರಕ್ಕೆ ಹೋದರು. ಈ ಸಮಯದಲ್ಲಿ 13 ವರ್ಷದ ಬಾಲಕ ಲಖನ್ ಮತ್ತು ಅವನ ಸಹೋದರ ಸಮುದ್ರದಲ್ಲಿ ಮುಳುಗಲು ಪ್ರಾರಂಭಿಸಿದರು. ಲಖನ್ ಸಹೋದರನನ್ನು ಜನರು ರಕ್ಷಿಸಿದರೆ, ಲಖನ್ ನಾಪತ್ತೆಯಾಗಿದ್ದ. ಇದೀಗ ಬಾಲಕ ಪವಾಡವೆಂಬಂತೆ ಬದುಕಿ ಬಂದಿದ್ದಾನೆ.

ಎಷ್ಟು ಹುಡುಕಿದರೂ ಪತ್ತೆಯಾಗದ ಬಾಲಕ!

ಲಖನ್‌ನ ಸಹೋದರರ ಜೀವವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಈ ಬಾಲಕ ಮಾತ್ರ ಎಷ್ಟು ಹುಡುಕಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಆ ಬಾಲಕ ನೀರುಪಾಲಾಗಿರುವ ಸಾಧ್ಯತೆ ಇದೆ. ಆತ ಬದುಕಿರುವ ಸಾಧ್ಯತೆ ಕಡಿಮೆ ಎಂದು ಎಲ್ಲರೂ ಅಂದುಕೊಂಡಿದ್ದರು. ಬಳಿಕ ಮರುದಿನ, ಸ್ಥಳೀಯ ಆಡಳಿತ ಮತ್ತು ಕುಟುಂಬ ಸದಸ್ಯರು ಮತ್ತೆ ಹುಡುಕಾಟವನ್ನು ಮುಂದುವರೆಸಿದರು.

ಇದನ್ನೂ ಓದಿ: ವಿಮಾನ ಸಿಬ್ಬಂದಿಗಳು, ಪೈಲಟ್‌ಗಳು ಮೌತ್‌ ವಾಶ್‌, ಟೂತ್‌ ಜೆಲ್‌, ಸುಗಂಧ ದ್ರವ್ಯ ಬಳಸುವಂತಿಲ್ಲ! – ಏನಿದು ಹೊಸ ರೂಲ್ಸ್‌?

ಬದುಕಿ ಬಂದ ಬಾಲಕ!

ಮರುದಿನ ಸ್ಥಳೀಯ ಆಡಳಿತ ಮತ್ತು ಕುಟುಂಬಸ್ಥರು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿರುವ ವೇಳೆ ಕುಟುಂಬಸ್ಥರಿಗೆ ಬಾಲಕ ಬದುಕಿರುವ ಸುದ್ದಿ ತಿಳಿಯುತ್ತದೆ. ಸಮುದ್ರದಲ್ಲಿ ಮೀನುಗಾರರು ಲಖನ್‌ನನ್ನು ರಕ್ಷಿಸಿದ್ದಾರೆ ಎಂಬ ಸಂದೇಶವನ್ನು ಪೊಲೀಸರು ಕುಟುಂಬಕ್ಕೆ ನೀಡಿದ್ದಾರೆ. ಮಗನ ಶವಕ್ಕಾಗಿ ಹುಡುಕಾಟ ನಡೆಸಿದ ತಂದೆಗೆ ಮಗ ಬದುಕಿರುವ ಸುದ್ದಿ ಸಿಗುತ್ತಿದ್ದಂತೆ ಆನಂದಬಾಷ್ಪ ಹರಿಸಿದ್ದಾರೆ.

ಲಖನ್ಪ್ರಾಣ ಉಳಿದಿದ್ದೀಗೆ..

“ನವದುರ್ಗ” ಎಂಬ ದೋಣಿಯಲ್ಲಿ ಸುಮಾರು ಎಂಟು ಮೀನುಗಾರರು ಸಮುದ್ರಕ್ಕೆ ಹೋಗಿದ್ದರು. ಅವರು ಸಮುದ್ರದ ಮಧ್ಯದಲ್ಲಿ ಮರದ ಹಲಗೆಯ ಮೇಲೆ ಕುಳಿತಿರುವ ಬಾಲಕನನ್ನು ಗುರುತಿಸಿದರು. ಸಹಾಯಕ್ಕಾಗಿ ಆತ ಕೈಗಳನ್ನು ಎತ್ತಿ ಸಿಗ್ನಲ್‌ ಕೊಡುತ್ತಿದ್ದ. ಮೀನುಗಾರರು ಕೂಡಲೇ ತಮ್ಮ ದೋಣಿಯೊಂದಿಗೆ ಬಾಲಕನ ಬಳಿಗೆ ಬಂದು ದೋಣಿಯೊಳಗೆ ಕರೆತಂದಿದ್ದಾರೆ. ಬಳಿಕ ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ನಡೆದ ವಿಚಾರವನ್ನು ಮೀನುಗಾರರಿಗೆ ತಿಳಿಸಿದ್ದಾನೆ.

ಮರದ ಹಲಗೆ ಎಲ್ಲಿಂದ ಬಂತು?

ಬಾಲಕನನ್ನು ಆ ಗಣಪನೇ ಕಾಪಾಡಿದ್ದಾನೆ ಎಂದು ಹೇಳಬಹುದು. ಏಕೆಂದರೆ ಆತ ಸುಮಾರು 36 ಗಂಟೆಗಳ ಕಾಲ ಗಣೇಶ ಮೂರ್ತಿಯನ್ನು ಕೂರಿಸಿದ್ದ ಮರದ ಹಲಗೆಯ ಮೇಲೆ ಆಶ್ರಯ ಪಡೆದಿದ್ದಾನೆ. ಈ ಮರದ ಹಲಗೆಯೇ ಆತನ ಜೀವವನ್ನು ಉಳಿಸಿದೆ.  ಬಾಲಕ ಸಮುದ್ರದಲ್ಲಿ ಪತ್ತೆಯಾದ ಸ್ಥಳವು ಸಮುದ್ರ ತೀರದಿಂದ ಸುಮಾರು 14 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ. ಹನ್ನೆರಡು ಗಂಟೆಗಳ ನಂತರ ಮೀನುಗಾರರು ಬಾಲಕನೊಂದಿಗೆ ಬಿಳಿಮೊರಾ ತಲುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನೀರಿನಲ್ಲಿದ್ದರೂ ಆರೋಗ್ಯವಾಗಿದ್ದ ಬಾಲಕ!

36 ಗಂಟೆಗಳ ನಂತರ ಬದುಕುಳಿಯುವುದು ಪವಾಡವೇ ಸರಿ. ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಲಖನ್ 36 ಗಂಟೆಗಳ ನಂತರ ಧೋಲೈ ಬಂದರ್‌ನಲ್ಲಿ ಪತ್ತೆಯಾಗಿದ್ದಾರೆ. ನವಸಾರಿ ಆಸ್ಪತ್ರೆಯಲ್ಲಿ ಬಾಲಕನನ್ನು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ICU ನಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ 24 ಗಂಟೆಗಳ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು. ಆತ ಆರೋಗ್ಯವಾಗಿದ್ದಾನೆ ಎಂದು ದೃಢಪಟ್ಟಿದೆ. ಅವನು ತಮ್ಮ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾನೆ.

Shwetha M