ಸುದ್ದಿ ವಾಹಿನಿಗಳಿಗೆ ವಾರ್ನಿಂಗ್ ಕೊಟ್ಟ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ಸುದ್ದಿ ವಾಹಿನಿಗಳಿಗೆ ವಾರ್ನಿಂಗ್ ಕೊಟ್ಟ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

ನವದೆಹಲಿ: ಸುದ್ದಿ ನೀಡುವ ಧಾವಂತದಲ್ಲಿ ಘಟನೆಗಳನ್ನು ಭೀಕರವಾಗಿ ವಿಶ್ಲೇಷಿಸುವ ಖಾಸಗಿ ಸುದ್ದಿ ವಾಹಿನಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಎಚ್ಚರಿಕೆ ನೀಡಿದೆ. ಮಹಿಳೆ, ಮಕ್ಕಳು, ವೃದ್ಧರ ಮೇಲಿನ ದೌರ್ಜನ್ಯ, ಅಪಘಾತ, ಹಿಂಸಾಚಾರ ಮತ್ತು ಸಾವಿನ ಸುದ್ದಿಗಳನ್ನು ಭೀರಕವಾಗಿ ವರದಿ ಮಾಡಬಾರದು ಎಂದು ಹೇಳಿದೆ.

ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಟ್ವೀಟ್ ಮಾಡಿದ್ದು, ಭೀಕರವಾಗಿ ವರದಿ ಪ್ರಸಾರ ಮಾಡುವುದನ್ನು ನೋಡಲು ಮತ್ತು ಕೇಳಲು ಸಹ್ಯವಾಗಿರುವುದಿಲ್ಲ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕಬೇಕು. ಅಲ್ಲದೇ  ಸುದ್ದಿಗಳನ್ನು ಬಿತ್ತರಿಸುವಾಗ ಸಾಮಾಜಿಕ ಪ್ರಜ್ಞೆ ಮರೆಯಬಾರದು ಎಂದು ಹೇಳಿದೆ.

ಇದನ್ನೂ ಓದಿ: ಪ್ರಧಾನಿಯಾಗಿ ರಾಹುಲ್ ಗಾಂಧಿ, ಗೇಮ್ ಚೇಂಜರ್ ಆಗುತ್ತಾರೆ ಮಮತಾ ಬ್ಯಾನರ್ಜಿ – ಏನಿದು ಶತ್ರುಘ್ನ ಲೆಕ್ಕಾಚಾರ?

ಈ ಬಗ್ಗೆ ವಿವರವಾದ ಸಲಹಾ ಪತ್ರ ಬಿಡುಗಡೆಗೊಳಿಸಿರುವ ಸಚಿವಾಲಯ, 1995ರ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ಗಳ ( ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಕಾರ್ಯಕ್ರಮದ ನೀತಿ ಸಂಹಿತೆಗೆ ಬದ್ದವಾಗಿರುವಂತೆ ಸೂಚಿಸಿದೆ. ‘ವ್ಯಕ್ತಿಗಳ ಮೃತದೇಹ ಮತ್ತು ಗಾಯಗೊಂಡ ವ್ಯಕ್ತಿಗಳ ಫೋಟೋ ಹಾಗೂ ವಿಡಿಯೋಗಳನ್ನು ರಕ್ತ ಕಾಣುವಂತೆ, ಮಹಿಳೆಯರ ಮುಖ ಕಾಣುವಂತೆ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಇಂತಹ ಫೋಟೋ ಹಾಗೂ ವಿಡಿಯೋಗಳನ್ನು ಮುಸುಕುಗೊಳಿಸಿ ಸುದ್ದಿ ಪ್ರಸಾರ ಮಾಡಬೇಕು’ ಎಂದು ಎಚ್ಚರಿಕೆ ನೀಡಿದೆ.

ಟಿವಿ ಕುಟುಂಬಸ್ಥರೆಲ್ಲರೂ ಒಟ್ಟಾಗಿ ನೋಡುವ ವೇದಿಕೆಯಾಗಿದೆ. ಹಾಗಾಗಿ ಸುದ್ದಿ ನೀಡುವ ಧಾವಂತದಲ್ಲಿ ಸಭ್ಯತೆ ಮರೆಯಬಾರದು. ಮಹಿಳೆಯರು, ವೃದ್ದರು, ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಸ್ತು, ಬದ್ಧತೆ ಪ್ರದರ್ಶಿಸಬೇಕು ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

suddiyaana