ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ  ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ

ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ  ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ

ಪ್ರಕೃತಿ ಸೌಂದರ್ಯ ಆಸ್ವಾದಿಸಲು ಸಿಲಿಕಾನ್‌ ಸಿಟಿ ಜನರು ಹೆಚ್ಚಾಗಿ ಪಶ್ಚಿಮಘಟ್ಟ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇನ್ನೂ ಮಳೆಗಾಲ ಬಂತೆಂದರೆ ಚಾರ್ಮಾಡಿ ಘಾಟ್‌, ಬಿಸ್ಲೆ ಘಾಟ್‌ ಮುಂತಾದ ಪ್ರದೇಶಗಳಿಗೆ ಹೋಗುವುದು ಸಾಮಾನ್ಯ. ಇನ್ನು ಮುಂದೆ ಪಶ್ಚಿಮಘಟ್ಟಗಳ ಸೌಂದರ್ಯ ಆಸ್ವಾದಿಸಲು ಅಲ್ಲಿಗೆ ಹೋಗಬೇಕಾಗಿಲ್ಲ. ಪ್ರಕೃತಿಯ ಸೌಂದರ್ಯವನ್ನು ಇನ್ನು ಮುಂದೆ ಬೆಂಗಳೂರಿನಲ್ಲಿಯೇ ನೋಡಬಹುದು. ಅದೂ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ!

ಹೌದು, ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮಘಟ್ಟ ನಿರ್ಮಾಣವಾಗಲಿದೆ. ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆರು ಎಕರೆ ಬಂಜರು ಭೂಮಿಯಲ್ಲಿ ಸಹ್ಯಾದ್ರಿ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: ಹೆತ್ತವರ ಜೊತೆ ರಾಂಚಿ ಟೆಸ್ಟ್ ಹೀರೋ ಧ್ರುವ್ ಜುರೆಲ್ – ತಂದೆ ತಾಯಿಗೆ ಪ್ರಶಸ್ತಿ ಅರ್ಪಣೆ

ಸದ್ಯ ಲಾಲ್ ಬಾಗ್ ತೋಟಗಾರಿಕೆ ಇಲಾಖೆ ಪಾಳು ಬಿದ್ದ ಜಾಗದಲ್ಲಿ 6 ಎಕರೆಯ ಕಲ್ಲು ಬಂಡೆಯಂತಹ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನ ಹಾಕಿದ್ದು, ಪಶ್ಚಿಮ ಘಟ್ಟದ ರೀತಿ ಅಭಿವೃದ್ದಿ ಪಡಿಸಲು ಮುಂದಾಗಿದೆ. ಈಗಾಗಲೇ ಈ ಗಿಡಗಳನ್ನ ಹಾಕಿ 5 ರಿಂದ 6 ತಿಂಗಳು‌ ಕಳೆದಿದ್ದು, ಇನ್ನು ಐದು ವರ್ಷದಲ್ಲಿ ಈ ಗಿಡಗಳು ದೊಡ್ಡದಾಗಿ ಬೆಳೆಯಲಿವೆ.

ದಟ್ಟ ಕಾಡಿನಂತೆಯೇ ನಿರ್ಮಾಣವಾಗಲಿವೆ. ಇನ್ನು ಇಲ್ಲಿ ಉಳುಗೇರಿ, ಪ್ರುತ್ರಂಜೀವ, ಎಣ್ಣೆ ಮರ, ಗಾರ್ಸಿನಿಯಾ, ಮ್ಯಾಂಗೋ ಸ್ಟೀನ್, ನವಿಲಾಡಿ, ದೂಪದ ಮರ, ಡಯಾಸ್ ಸ್ಪರಸ್, ಪಾಲ್ಸ ಹಣ್ಣು,‌ ಸ್ರೋಪ್ ಪೈನ್, ಅಂಟುವಾಳ, ಮಡ್ಡಿ ದೀಪದ ಮರ, ಸ್ಫೈಸ್ ಮರಗಳು, ರುದ್ರಾಕ್ಷಿ ಮರ, ತಾರೇ ಮರ, ಆರ್​ಡಿಸಿಯಾ ಎಮಿಲಿಸಿಸ್‌ ಸೇರಿದಂತೆ ಹಲವು ಅಪರೂಪದ ಗಿಡಗಳನ್ನು ಹಾಕಲಾಗಿದೆ. ಈ ಗಿಡಗಳು ಅಳಿವಿನಂಚಿನಲ್ಲಿದ್ದು, ಹೊಸ ವೈವಿಧ್ಯತೆಯನ್ನ ಸೃಷ್ಟಿಮಾಡಲು ತೋಟಾಗಾರಿಕಾ ಇಲಾಖೆ ಮುಂದಾಗಿದೆ.

ಈ ಫಾರೆಸ್ಟ್ ನಿರ್ಮಿಸಲು ಒಟ್ಟು 45 ಲಕ್ಷದಷ್ಟು ಖರ್ಚು ಮಾಡಿದ್ದು, ಸಧ್ಯ ಬಾಟಾನಿಕಲ್ ಗಾರ್ಡಾನ್ ಬಗ್ಗೆ ಸಂಶೋಧನೆ ಮಾಡುವ ವಿಧ್ಯಾರ್ಥಿಗಳಿಗೆ ನೋಡುವುದಕ್ಕೆ ಅವಾಕಾಶ ಮಾಡಿಕೊಡಲಾಗುತ್ತಿದೆ.‌ ಮುಂದಿನ ದಿನಗಳ‌ಲ್ಲಿ ಇಲ್ಲಿ ಮರಗಳು ದೊಡ್ಡದಾದ ನಂತರ ಪ್ರವಾಸಿಗರು ನೋಡಲು ಅವಕಾಶ ಮಾಡಿಕೊಡಲಾಗುತ್ತೆ. ಪಕ್ಷಿಗಳು ಜೀವಿಸಲು ಅನುಕೂಲವಾಗುವ ರೀತಿಯಲ್ಲಿ ‌ಪಶ್ಚಿಮ ಘಟ್ಟದ ಕಾಡನ್ನ ನಿರ್ಮಿಸಲಾಗುತ್ತಿದೆ.

Shwetha M