ಸರ್ಕಾರಕ್ಕೆ ಸವಾಲಾದ ಕ್ಷೀರಭಾಗ್ಯ – ಯೋಜನೆಗೆ ಹಾಲಿನ ಪೌಡರ್‌ ಪೂರೈಸಲು ಹಾಲು ಒಕ್ಕೂಟ ಹಿಂದೇಟು

ಸರ್ಕಾರಕ್ಕೆ ಸವಾಲಾದ ಕ್ಷೀರಭಾಗ್ಯ – ಯೋಜನೆಗೆ ಹಾಲಿನ ಪೌಡರ್‌ ಪೂರೈಸಲು ಹಾಲು ಒಕ್ಕೂಟ ಹಿಂದೇಟು

ಬೆಂಗಳೂರು: ರಾಜ್ಯದಲ್ಲಿ ಒಂಡೆದೆ ಹಾಲಿನ ಅಭಾವ ಉಂಟಾಗಿದ್ದರೆ, ಇನ್ನೊಂದೆಡೆ ಹಾಲಿನ ಒಕ್ಕೂಟಗಳು ಸೂಕ್ತ ಬೆಲೆ ಇಲ್ಲದೆ ನಷ್ಟದಲ್ಲಿವೆ ಎಂದು ಹೇಳುತ್ತಿವೆ. ಇದೀಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಗೆ ತೊಡಕು ಉಂಟಾಗಿದೆ. ಕ್ಷೀರಭಾಗ್ಯ ಯೋಜನೆಗೆ ಹಾಲಿನ ಪುಡಿ ಪೂರೈಸಲು ಹಾಲು ಒಕ್ಕೂಟಗಳು ಹಿಂದೇಟು ಹಾಕುತ್ತಿದ್ದು, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಕ್ಕಳ ಅಪೌಷ್ಠಿಕತೆ ನಿವಾರಣೆಗೆಂದು ರಾಜ್ಯ ಸರ್ಕಾರ 2013 ರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆ ಆರಂಭ ಮಾಡಿದೆ. ರಾಜ್ಯದಲ್ಲಿ 48 ಸಾವಿರ ಸರಕಾರಿ ಹಾಗೂ 6 ಸಾವಿರ ಅನುದಾನಿತ ಶಾಲೆಗಳಿದ್ದು, ಕ್ಷೀರ ಭಾಗ್ಯ ಯೋಜನೆಯಡಿ ಒಂದನೇ ತರಗತಿಯಿಂದ  ಎಸ್ಸೆಸ್ಸೆಲ್ಸಿವರೆಗಿನ ಸುಮಾರು 53 ಲಕ್ಷ ಮಕ್ಕಳಿಗೆ ವಾರದಲ್ಲಿ 5 ದಿನ ಹಾಲು ವಿತರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ನಿತ್ಯವೂ (ಸರಕಾರಿ ರಜಾ ದಿನ ಹೊರತುಪಡಿಸಿ) 150 ಮಿ.ಲೀ. ಹಾಲು ಕೊಡಲಾಗುತ್ತಿದ್ದು, ಯೋಜನೆಯು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ನೆರವಾಗುತ್ತಿದೆ. ಆದರೆ ಈ ಯೋಜನೆಯಿಂದ ಹಾಲಿನ ಪುಡಿ ಉತ್ಪಾದನೆಯು ಹಾಲು ಒಕ್ಕೂಟಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: ಶಾಲೆಗಳಲ್ಲಿ ವಾರಕ್ಕೆ 2 ದಿನ ನೀಡುತ್ತಿದ್ದ ಮೊಟ್ಟೆ-ಬಾಳೆಹಣ್ಣು ಇನ್ನು ಒಂದೇ ದಿನ!

ಒಂದು ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ ಕನಿಷ್ಟ  9 ಲೀಟರ್‌ ಹಾಲಿನ ಅಗತ್ಯವಿದೆ. ಹಾಲಿನ ಒಕ್ಕೂಟಗಳು ರೈತರಿಂದ ಲೀಟರ್‌ಗೆ ಸರಾಸರಿ 33 ರೂ. ದರದಲ್ಲಿ ಹಾಲು ಖರೀದಿಸುತ್ತಿವೆ. ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಉತ್ಪಾದನೆಗೆ ದಿನವೊಂದಕ್ಕೆ 8 ಲಕ್ಷ ಲೀಟರ್‌ ಹಾಲು ಬಳಕೆಯಾಗುತ್ತಿದೆ. ಒಂದು ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ  348 ರೂ. ವೆಚ್ಚ ತಗಲುತ್ತಿದೆ. ಸರಕಾರ ಕ್ಷೀರ ಭಾಗ್ಯ ಯೋಜನೆಗೆ ಖರೀದಿಸುತ್ತಿರುವ ಹಾಲಿನ ಪುಡಿ ಕೆ.ಜಿ.ಗೆ 300 ರೂ. ನಿಗದಿಪಡಿಸಿದೆ. ಹೀಗಾಗಿ, ಹಾಲು ಒಕ್ಕೂಟಗಳು ಪ್ರತಿ ಕೆ.ಜಿ.ಗೆ 48 ರೂ. ನಷ್ಟ ಮಾಡಿಕೊಂಡು ಹಾಲಿನ ಪುಡಿ ಪೂರೈಸುವ ಅನಿವಾರ್ಯತೆಗೆ ಸಿಲುಕಿವೆ. ಜತೆಗೆ, ಹಾಲಿನ ಪುಡಿ ಸಾಗಾಣಿಕೆ ವೆಚ್ಚದ ಹೊರೆಯನ್ನು ಒಕ್ಕೂಟಗಳೇ ಭರಿಸುತ್ತಿವೆ. ಹೀಗಾಗಿ ಕ್ಷೀರಭಾಗ್ಯ ಯೋಜನೆಗೆ ಹಾಲಿನ ಪುಡಿ ಪೂರೈಸಲು ಹಾಲು ಒಕ್ಕೂಟಗಳು ಹಿಂದೇಟು ಹಾಕುತ್ತಿವೆ.

ಒಕ್ಕೂಟಗಳು ನಷ್ಟದ ನೆಪವೊಡ್ಡಿ ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಪೂರೈಸಲು ಒಪ್ಪುತ್ತಿಲ್ಲ. ಮುಖ್ಯವಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಶಾಲೆಗಳಿಗೆ ಹಾಲಿನ ಪುಡಿ ಪೂರೈಸಲು ಹಿಂದೇಟು ಹಾಕುತ್ತಿವೆ. ಮುಂಗಡ ಹಣ ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಿದ್ದು, ಆ ಭಾಗದ ಒಕ್ಕೂಟಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹಾಲಿನ ಪುಡಿ ಉತ್ಪಾದನೆ ಆಗುತ್ತಿಲ್ಲ. ಹೀಗಾಗಿ, ದಕ್ಷಿಣದ ಜಿಲ್ಲಾ ಹಾಲು ಒಕ್ಕೂಟಗಳಿಂದಲೇ ಆ ಭಾಗದ ಶಾಲೆಗಳಿಗೆ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿರುವ ಬೆಂಗಳೂರು, ಹಾಸನ, ಮಂಡ್ಯ, ಚಾಮರಾಜನಗರ ಹಾಗೂ ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಪೂರೈಸುತ್ತಿವೆ. ಉಳಿದ ಒಕ್ಕೂಟಗಳು ತಮ್ಮ ಜಿಲ್ಲೆ ವ್ಯಾಪ್ತಿಯೊಳಗಿನ ಶಾಲೆಗಳಿಗೆ ಮಾತ್ರ ಹಾಲಿನ ಪುಡಿ ಪೂರೈಸುವುದಾಗಿ ಪಟ್ಟು ಹಿಡಿದಿವೆ.

ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಪೂರೈಸಲೇಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಸರಕಾರ, ಮುಂದಿನ 2 ತಿಂಗಳಿಗೆ ಅಗತ್ಯವಿರುವಷ್ಟು ಹಾಲಿನ ಪುಡಿ ಪೂರೈಸುವಂತೆ ಒಕ್ಕೂಟಗಳಿಗೆ ಮುಂಗಡವಾಗಿ ಹಣ ಬಿಡುಗಡೆ ಮಾಡಿದೆ. ಶಿಕ್ಷಣ ಇಲಾಖೆಯು ಪ್ರತಿ ಕೆ.ಜಿ. ಹಾಲಿನ ಪುಡಿಗೆ ಹೆಚ್ಚುವರಿಯಾಗಿ 25 ರೂ. ನೀಡುತ್ತಿದೆ. ಆದರೂ ಒಕ್ಕೂಟಗಳು ಹಾಲಿನ ಪುಡಿ ಪೂರೈಕೆಗೆ ಹಿಂದೇಟು ಹಾಕುತ್ತಿವೆ ಎಂದು ಮೂಲಗಳು ತಿಳಿಸಿವೆ.

suddiyaana