ಆರ್‌ಸಿಬಿ ಜೊತೆಗಿನ ಸಂಬಂಧ ಅಂತ್ಯ- ತಂಡದಿಂದ ಹೊರಬಂದ ಮೇಲೆ ಧನ್ಯವಾದ ಹೇಳಿದ ಮೈಕ್ ಹೆಸ್ಸನ್

ಆರ್‌ಸಿಬಿ ಜೊತೆಗಿನ ಸಂಬಂಧ ಅಂತ್ಯ- ತಂಡದಿಂದ ಹೊರಬಂದ ಮೇಲೆ ಧನ್ಯವಾದ ಹೇಳಿದ ಮೈಕ್ ಹೆಸ್ಸನ್

ಈ ಸಲ ಕಪ್ ನಮ್ದೇ ಎಂದು ಆರ್‌ಸಿಬಿ ಫ್ಯಾನ್ಸ್ ಹೇಳುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಖಂಡಿತವಾಗಿಯೂ ಕಪ್ ನಮ್ಮದೇ ಎಂಬ ಅಭಿಪ್ರಾಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಂದಿದೆ. ಈ ಬಾರಿ 2024ರ ಐಪಿಎಲ್‌ಗೆ ಈಗಿನಿಂದಲೇ ಆರ್‌ಸಿಬಿ ಫ್ರಾಂಚೈಸಿ ಭರ್ಜರಿ ತಯಾರಿ ಮಾಡಿಕೊಂಡಿದೆ. ಜೊತೆಗೆ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದೆ. ಈ ಹಿಂದೆ ತಂಡದ ಮುಖ್ಯ ಕೋಚ್ ಹಾಗೂ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿದ್ದ ಸಂಜಯ್ ಬಂಗಾರ್ ಮತ್ತು ಮೈಕ್ ಹೆಸ್ಸನ್‌ರನ್ನು ತಂಡದಿಂದ ಕೈಬಿಟ್ಟಿದೆ. ಇದರ ಜೊತೆಗೆ ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಆ್ಯಂಡಿ ಫ್ಲವರ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಇದೀಗ ಆರ್‌ಸಿಬಿ ತಂಡದಿಂದ ಹೊರಬಿದ್ದ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ಆರ್‌ಸಿಬಿಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ಸಿಕ್ತು ಆನೆ ಬಲ – ಹೊಸ ಮುಖ್ಯ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ವಾಸ್ತವವಾಗಿ ಸಂಜಯ್ ಬಂಗಾರ್ ಮತ್ತು ಮೈಕ್ ಹೆಸ್ಸನ್ ಅವರ ಅಧಿಕಾರವಧಿ ಈ ವರ್ಷಕ್ಕೆ ಅಂತ್ಯವಾಗಿತ್ತು. ಈ ಇಬ್ಬರನ್ನು ತಂಡದೊಂದಿಗೆ ಇರಿಸಿಕೊಳ್ಳಲು ಉತ್ಸಾಹ ತೋರದ ಫ್ರಾಂಚೈಸ್, ಈ ಇಬ್ಬರನ್ನೂ ತಂಡದಿಂದ ಕೈಬಿಟ್ಟಿದೆ. ಇದೀಗ ತಂಡದೊಂದಿಗೆ ಸಂಬಂಧ ಕಡಿದುಕೊಂಡ ತಂಡದ ಮಾಜಿ ನಿರ್ದೇಶಕ ಮೈಕ್ ಹೆಸ್ಸನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆರ್‌ಸಿಬಿ ಫ್ರಾಂಚೈಸ್‌ಗೆ ಧನ್ಯವಾದ ತಿಳಿಸಿದ್ದಾರೆ. ವಾಸ್ತವವಾಗಿ ಆರ್‌ಸಿಬಿಯಲ್ಲಿ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಅಧಿಕಾರವಧಿ ಈ ಸೆಪ್ಟಂಬರ್‌ಗೆ ಅಂತ್ಯಗೊಳ್ಳುತ್ತಿದೆ. ಈ ಇಬ್ಬರು ಕೂಡ ತಂಡದೊಂದಿಗೆ ಮತ್ತೊಂದು ಒಪ್ಪಂದಕ್ಕೆ ಸಹಿ ಮಾಡಲು ಸಿದ್ದರಿದ್ದರು. ಆದರೆ ಆರ್‌ಸಿಬಿ ಫ್ರಾಂಚೈಸಿ ಈ ಇಬ್ಬರ ಒಪ್ಪಂದವನ್ನು ಮುಂದುವರೆಸಲು ಇಚ್ಚಿಸಲಿಲ್ಲ. ಹೀಗಾಗಿ ಆರ್‌ಸಿಬಿಯೊಂದಿಗೆ ಈ ಇಬ್ಬರ ಸಂಬಂಧ ಅಂತ್ಯಗೊಂಡಿದೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಹೆಸ್ಸನ್, ಆರ್‌ಸಿಬಿ ಅಭಿಮಾನಿಗಳಿಗೆ ಮತ್ತು ಅವಕಾಶವನ್ನು ನೀಡಿದ ಮಾಲೀಕರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ತಮ್ಮ ಪೋಸ್ಟ್‌ನಲ್ಲಿ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಹೆಸ್ಸನ್, ‘ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವಂತೆ ಮಾರ್ಗದರ್ಶನ ಮಾಡಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ. ಕಳೆದ 4 ಸೀಸನ್‌ಗಳಲ್ಲಿ ನಾವು 3 ಪ್ಲೇಆಪ್‌ಗಳನ್ನು ಆಡಿದ್ದೇವೆ. ಆದರೆ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳು ಇಷ್ಟಪಡುವ ಟ್ರೋಫಿಯನ್ನು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಆರ್‌ಸಿಬಿಯನ್ನು ತೊರೆಯುತ್ತಿರುವುದು ಬೇಸರ ತಂದಿದ್ದರೂ, ತಂಡದ ಒಳಗೆ ಮತ್ತು ಹೊರಗೆ ಮಹಾನ್ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಹಲವು ನೆನಪುಗಳನ್ನು ಹೊಂದಿದ್ದೇನೆ’. ‘ನನಗೆ ತಂಡದಲ್ಲಿ ಅವಕಾಶ ನೀಡಿದ ಮ್ಯಾನೇಜ್‌ಮೆಂಟ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ಆರ್‌ಸಿಬಿಯ ಹೊಸ ಕೋಚಿಂಗ್ ತಂಡಕ್ಕೆ ಶುಭ ಹಾರೈಸುತ್ತೇನೆ. ಕೊನೆಯದಾಗಿ ನಮಗೆ ಅದ್ಭುತ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

suddiyaana