ಇತಿಹಾಸದ ಪುಟ ಸೇರಲಿದೆ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ –  ಫೆ. 14, 2023ಕ್ಕೆ ಸಂಪೂರ್ಣ  ನಿಷ್ಕ್ರಿಯ

ಇತಿಹಾಸದ ಪುಟ ಸೇರಲಿದೆ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ –  ಫೆ. 14, 2023ಕ್ಕೆ ಸಂಪೂರ್ಣ  ನಿಷ್ಕ್ರಿಯ

ಕಳೆದ 27 ವರ್ಷಗಳ ಹಿಂದೆ ಜಗತ್ತಿಗೆ ಇಂಟರ್‌ನೆಟ್ ಎಂದರೆ ಏನು ಎಂಬುದನ್ನು ಪರಿಚಯಿಸಿದ್ದ ಜನಪ್ರಿಯ ‘ಇಂಟರ್ನೆಟ್ ಎಕ್ಸ್‌ಪ್ಲೋರರ್’ ಬ್ರೌಸರ್ ಈ ಫೆಬ್ರವರಿ 14, 2023 ರಂದು ಇತಿಹಾಸದ ಪುಟ ಸೇರಲಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದೆ.

21ನೇ ಶತಮಾನದ ಆರಂಭದಲ್ಲಿ  ಪರಿಚಯವಾಗಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಅನ್ನು ಕಳೆದ ಜೂನ್‌ 15 ರಿಂದಲೇ ಸ್ಥಗಿತಗೊಳಿಸಲಾಗಿತ್ತು. ಇದೀಗ ವಿಂಡೋಸ್‌ನಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಅನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸುವಿಕೆಯ ಕುರಿತು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದ್ದು, ತನ್ನ ಹೊಸ ‘ಮೈಕ್ರೋಸಾಫ್ಟ್ ಎಡ್ಜ್’ ಬ್ರೌಸರ್‌ಗೆ ಮುಂದಿನ ಅಪ್‌ಡೇಟ್ ದೊರೆಯುವ ದಿನದಂದೇ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಸಹ ಅಧಿಕೃತವಾಗಿ ಕಣ್ಮರೆಯಾಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: 3,000 ಮೀಟರ್ ಸಮುದ್ರದ ಆಳದಲ್ಲಿ “ಹಳದಿ ಇಟ್ಟಿಗೆ ರಸ್ತೆ”!

ಫೆಬ್ರವರಿ 14, 2023 ರಂದು ಮೈಕ್ರೋಸಾಫ್ಟ್ ಸಂಸ್ಥೆ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ಗೆ ನವೀಕರಣವನ್ನು ತರುತ್ತಿದೆ. ಇದರಿಂದ ವಿಂಡೋಸ್ 10ನ ಆವೃತ್ತಿಗಳಿಂದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಶಾಶ್ವತವಾಗಿ ನಿಷ್ಕ್ರಿಯವಾಗಲಿದೆ. ಆ ನಂತರ ಇತಿಹಾಸದ ಗತವೈಭವವೊಂದು ಮರೆಯಾಗಲಿದೆ ಎಂದು ತಿಳಿಸಿದೆ.

ಮೈಕ್ರೋಸಾಫ್ಟ್ ಮುಂದಿನ ಪ್ರಮುಖ ವಿಂಡೋಸ್ 10 ನವೀಕರಣವನ್ನು ಪರೀಕ್ಷಿಸುವ ‘ಅಂತಿಮ ಹಂತದಲ್ಲಿ’ ಇರುವಾಗ ಅದು ಮೂರನೇ ವ್ಯಕ್ತಿಯ ಬ್ರೌಸರ್‌ಗಳ ಬದಲಿಗೆ ಮೈಕ್ರೋಸಾಫ್ಟ್ ಎಡ್ಜ್ ಅನ್ನು ಪ್ರಯತ್ನಿಸಲು ಬಳಕೆದಾರರನ್ನು ಪ್ರೇರೇಪಿಸುತ್ತಿದೆ. ಮೂರನೇ ವ್ಯಕ್ತಿಯ ಬ್ರೌಸರ್‌ಗಳನ್ನು ಸ್ಥಾಪಿಸದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡುವ ವಿಂಡೋ ಪ್ರಾಂಪ್ಟ್‌ಗಳನ್ನು ಪ್ರಕಟಿಸುವ ಮೂಲಕ ಗಮನಸೆಳೆದಿದೆ.

ಈ ವರ್ಷದ ಮಧ್ಯದಲ್ಲಿ ಜೂನ್‌ 15 ರಂದು ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ತನ್ನ ಸೇವೆಯಿಂದ ನಿವೃತ್ತಿಯಾಗಲಿದೆ ಎಂದು ಮೈಕ್ರೋಸಾಫ್ಟ್ ಕಂಪೆನಿ ತಿಳಿಸಿತ್ತು. 1995ರಲ್ಲಿ ಆರಂಭವಾಗಿ 2003ರ ವರೆಗೂ ಬಳಕೆದಾರರ ನೆಚ್ಚಿನ ಬ್ರೌಸರ್ ಆಗಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಆ ಬಳಿಕ ಮಾರುಕಟ್ಟೆಗೆ ಪ್ರವೇಶ ಮಾಡಿದ ಹೊಸ ಬ್ರೌಸರ್‌ಗಳ ಅಬ್ಬರ ಮುಂದೆ ಮಂಕಾಗಿತ್ತು. 2003 ರಲ್ಲಿ ಜಗತ್ತಿನ ಶೇ.93 ರಷ್ಟು ಇಂಟರ್ನೆಟ್ ಬಳಕೆದಾರನ್ನು ಹೊಂದಿದ್ದ ಇಂಟರ್ನೆಟ್ ಎಕ್ಸ್‌ಪ್ಲೋರರ್ ಇತರೆ ಕಂಪನಿಗಳ ಬ್ರೌಸರ್‌ಗೆ ಪೈಪೋಟಿ ಕೊಡಲಾಗದೇ ಶೂನ್ಯ ಸಂಖ್ಯೆಗೆ ಇಳಿಯುವ ಭಯವನ್ನು ಎದುರಿಸುತ್ತಿತ್ತು. ಹಾಗಾಗಿ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್‌ಗೆ ಕೊನೆ ಹಾಡಿ, ಭವಿಷ್ಯದ ವಿಂಡೋಸ್‌ಗಳಲ್ಲಿ ‘ಮೈಕ್ರೋಸಾಫ್ಟ್‌ ಎಡ್ಜ್’ ಬ್ರೌಸರ್ ಮೇಲೆ ಮೈಕ್ರೋಸಾಫ್ಟ್‌ ಹೆಚ್ಚು ಗಮನಹರಿಸುತ್ತಿದೆ.

suddiyaana