ಮಿಚಾಂಗ್‌ ಅಬ್ಬರ: ಆಂಧ್ರಪ್ರದೇಶದಲ್ಲಿ 40 ಲಕ್ಷ ಜನರಿಗೆ ಸಂಕಷ್ಟ – ತಮಿಳುನಾಡಿನಲ್ಲೂ ಭಯಾನಕ ಪರಿಸ್ಥಿತಿ

ಮಿಚಾಂಗ್‌ ಅಬ್ಬರ: ಆಂಧ್ರಪ್ರದೇಶದಲ್ಲಿ 40 ಲಕ್ಷ ಜನರಿಗೆ ಸಂಕಷ್ಟ – ತಮಿಳುನಾಡಿನಲ್ಲೂ ಭಯಾನಕ ಪರಿಸ್ಥಿತಿ

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮಿಚಾಂಗ್‌ ಚಂಡಮಾರುತ ಬಾಪಟ್ಟಾ ಸಮೀಪ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದ್ದು, ಇದೀಗ ಸೈಕ್ಲೋನ್‌  ದುರ್ಬಲಗೊಂಡಿದೆ. ಅದಕ್ಕೂ ಮುನ್ನ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಭಾರಿ ವಿನಾಶ ಸೃಷ್ಟಿಸಿದೆ. ಮಳೆ ಸಂಬಂಧಿ ಪ್ರಕರಣಗಳಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನೈಜೀರಿಯಾದಲ್ಲಿ ಗುರಿ ತಪ್ಪಿದ ಡ್ರೋನ್‌ ದಾಳಿ – 85 ನಾಗರಿಕರು ದಾರುಣ ಸಾವು

ಆಂಧ್ರಪ್ರದೇಶದಲ್ಲಿ ಹಾನಿಯಾಗಿದ್ದೆಷ್ಟು?

ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹಂಚಿಕೊಂಡ ಮಾಹಿತಿಯ ಪ್ರಕಾರ, 25 ಹಳ್ಳಿಗಳ ಮುಳುಗಡೆ ಸೇರಿದಂತೆ 194 ಹಳ್ಳಿಗಳು ಮತ್ತು ಎರಡು ಪಟ್ಟಣಗಳ ಸುಮಾರು 40 ಲಕ್ಷ ಜನರು ಮಿಚಾಂಗ್ ಚಂಡಮಾರುತದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಚಂಡಮಾರುತವು 770 ಕಿ.ಮೀ ರಸ್ತೆ ಹಾನಿಗೊಳಗಾಗಿದ್ದು, 35 ಮರಗಳು ಧರೆಗುರುಳಿವೆ. ರಾಜ್ಯದಾದ್ಯಂತ 204 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 15,173 ಜನರನ್ನು ಸ್ಥಳಾಂತರಿಸಲಾಗಿದೆ. ಪರಿಹಾರ ಕಾರ್ಯಗಳ ಭಾಗವಾಗಿ 18,073 ಆಹಾರ ಪೊಟ್ಟಣಗಳು ಮತ್ತು 1 ಲಕ್ಷಕ್ಕೂ ಹೆಚ್ಚು ನೀರಿನ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ. 80 ಆರೋಗ್ಯ ಶಿಬಿರಗಳನ್ನು ಸಹ ತೆರೆಯಲಾಗಿದೆ. ಸಂತ್ರಸ್ತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳಿಗಾಗಿ ₹23 ಕೋಟಿ ಬಿಡುಗಡೆ ಮಾಡಿದೆ. 78 ಗುಡಿಸಲುಗಳು, 232 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ರಾಜ್ಯದ ಕೋನಸೀಮಾ (234 ಕಿ. ಮೀ), ಪ್ರಕಾಶಂ (55 ಕಿ. ಮೀ), ನೆಲ್ಲೂರು (433 ಕಿ. ಮೀ) ಮತ್ತು ತಿರುಪತಿ (48 ಕಿ.ಮೀ) ಜಿಲ್ಲೆಗಳಲ್ಲಿ 770 ಕಿ. ಮೀ ರಸ್ತೆಗಳು ಹಾನಿಗೊಳಗಾಗಿವೆ.

ಆಂಧ್ರಪ್ರದೇಶದ ಪವ‌ರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್‌ನ 13 33-ಕೆವಿ ಫೀಡರ್‌ಗಳು, 312 11-ಕೆವಿ ಫೀಡರ್‌ಗಳು, 29 33/11-ಕೆವಿ ಉಪ-ಫೀಡರ್‌ಗಳು, ಒಂಬತ್ತು 33-ಕೆವಿ ಕಂಬಗಳು, 140 11-ಕೆವಿ ಕಂಬಗಳು ಮತ್ತು 244-ಎಲ್‌ಟಿ ಕಂಬಗಳಿಗೆ ಹಾನಿಯಾಗಿದೆ.  ನೆಲ್ಲೂರು ಜಿಲ್ಲೆಯ ಮನುಬೋಳುವಿನಲ್ಲಿ 366.5 ಮಿ.ಮೀ ಮಳೆ

5,060 ಕೋಟಿ ರೂ. ಪರಿಹಾರ ನೀಡುವಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಯ ನಡುವೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ತಕ್ಷಣವೇ 5060 ಕೋಟಿ ರೂ. ಮಧ್ಯಂತರ ಪರಿಹಾರ ನಿಧಿ ನೀಡುವಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಚಂಡಮಾರುತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲು ಕೇಂದ್ರದ ತಂಡವನ್ನು ಕಳುಹಿಸುವಂತೆಯೂ ಸಿಎಂ ಸ್ಟಾಲಿನ್ ಪ್ರಧಾನಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿರುವ ಡಿಎಂಕೆ ಸಂಸದ ಟಿಆರ್ ಬಾಲು ಅವರು ಪ್ರಧಾನಿ ಮೋದಿಯವರಿಗೆ ಖುದ್ದಾಗಿ ಪತ್ರವನ್ನು ನೀಡಲಿದ್ದಾರೆ. ಬುಧವಾರ ಬೆಳಗ್ಗೆ ತಮಿಳುನಾಡು ಸಿಎಂ ಕೂಡ ಚಂಡಮಾರುತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿದರು. ಮಂಗಳವಾರ ತಡರಾತ್ರಿ ಟ್ವೀಟ್ ಮಾಡಿರುವ ಸಿಎಂ ಸ್ಟಾಲಿನ್, ಮಿಚಾಂಗ್ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರಿ ಮಳೆಯ ನಂತರ ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇಲ್ಲಿಯವರೆಗೆ 17 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

Shwetha M