ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್! – ಮೆಜೆಸ್ಟಿಕ್ – ವೈಟ್ಫೀಲ್ಡ್ ನಡುವೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ
ಒಂದು ಕಾಲದಲ್ಲಿ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದ ಪ್ರಯಾಣವಾಗಿದ್ದ ನಮ್ಮ ಮೆಟ್ರೋದ ಸವಾರಿ ಈಗ, ಅದರಲ್ಲೂ ನೇರಳೆ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಸುತ್ತಾರೆ. ಪೀಕ್ ಅವರ್ಗಳಲ್ಲಿ ನಿಲ್ಲಲೂ ಜಾಗವಿಲ್ಲದಷ್ಟು ಜನರಿಂದ ತುಂಬಿರುತ್ತದೆ. ಇದೀಗ ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಿದೆ. ಇನ್ನುಮುಂದೆ ಪೀಕ್ ಅವರ್ಗಳಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಸಿಗಲಿದೆ.
ಇದನ್ನೂ ಓದಿ:ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಾಂಧವ್ಯ – ಗಿಳಿರಾಯನಿಗೆ ಪ್ರೀತಿಯ ಕೈತುತ್ತು ಕೊಟ್ಟ ಕಪಿರಾಯ!
ಹೌದು, ಈ ಬಗ್ಗೆ ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ. ಪೀಕ್ ಅವರ್ ಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾದ ಹಿನ್ನೆಲೆ ಆ ಸಮಯದಲ್ಲಿ ಪ್ರಯಾಣಿಕರ ಪರದಾಟ ತಪ್ಪಿಸಲು BMRCL ಕಡಿಮೆ ಸಮಯದಲ್ಲಿ ಹೆಚ್ಚು ರೈಲುಗಳನ್ನು ಬಿಡಲು ನಿರ್ಧಾರ ಮಾಡಿದೆ. ಮೆಜೆಸ್ಟಿಕ್ ನಿಂದ ಗರಡುಚಾರ್ ಪಾಳ್ಯ ಸ್ಟೇಷನ್ ಗಳ ನಡುವೆ ಪೀಕ್ ಅವರ್ ನಲ್ಲಿ ಹೆಚ್ಚು ರೈಲು ಓಡಾಟ ನಡೆಸಲು ಚಿಂತನೆ ನಡೆಸಿದೆ. ಈ ಮಾರ್ಗಗಳಲ್ಲಿ ಬೆಳಗ್ಗೆ 8.45 ರಿಂದ ಬೆಳಗ್ಗೆ 10.20 ರವೆಗೆ ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ ಮಾಡುವುದಾಗಿ ತಿಳಿಸಿದೆ.
ಟ್ರಿನಿಟಿ, ಇಂದಿರಾನಗರ, ಕೆ ಆರ್ ಪುರಂ, ಬೆನ್ನಿಗನಹಳ್ಳಿ ಪ್ರಯಾಣಿಕರ ಅವಶ್ಯಕತೆಗಳನ್ನ ಪೂರೈಸಲು ಬಿಎಂಆರ್ಸಿಎಲ್ ಪ್ಲ್ಯಾನ್ ಮಾಡಿದ್ದು, ಇದೇ ಸೋಮವಾರದಿಂದ ಬೆಳಗ್ಗಿನ ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ಮೆಟ್ರೋ ಸೇವೆ ಆರಂಭವಾಗಲಿದೆ. ಜೊತೆಗೆ ರೈಲು, ಇಂಟರ್ಸಿಟಿ ಬಸ್ಗಳಲ್ಲಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ರೈಲು ಸೇವೆ ಕೂಡ ಆರಂಭವಾಗುತ್ತಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು ಹೊರಡಲಿದೆ.
ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ, 5.00 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು BMRCL ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.