ಬಿಸಿಲ ಝಳದಿಂದ ಮೆಟ್ರೋ ಹಳಿಯಲ್ಲಿರುವ ರಬ್ಬರ್ ಗೆ ಬೆಂಕಿ – 20 ನಿಮಿಷ ಸಂಚಾರ ಬಂದ್
ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯ ಬಿಸಿಲ ಝಳ ಎಲ್ಲರನ್ನೂ ಹೈರಾಣಾಗಿಸಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಿನ ಎಫೆಕ್ಟ್ ಜೋರಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಸೂರ್ಯನ ಶಾಖದಿಂದ ನೇರಳೆ ಮಾರ್ಗದ ಮೆಟ್ರೋ ಹಳಿಯಲ್ಲಿರುವ ರಬ್ಬರ್ ಗೆ ಬೆಂಕಿ ತಗುಲಿದ ಘಟನೆ ಸೋಮವಾರ ನಡೆದಿದೆ.
ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಈ ಘಟನೆ ನಡೆದಿದೆ. ಮೆಟ್ರೋ ವಿವೇಕಾನಂದ ಮೆಟ್ರೋ ಬಳಿ ಬರುತ್ತಿದ್ದಂತೆ ಹಳಿಯ ರಬ್ಬರ್ ಗೆ ಬೆಂಕಿ ತಗುಲಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್ ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, ತಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ರೈಲು ನಿಲ್ಲಿಸಿ, ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚೌಕಾಕಾರದಲ್ಲಿದೆ ಈ ಸೈಕಲ್ ನ ಚಕ್ರ! – ರಸ್ತೆ ಮೇಲೆ ಸರಾಗವಾಗಿ ಸಾಗುತ್ತೆ ಬೈಸಿಕಲ್..
ಸುದ್ದಿ ತಿಳಿಯುತ್ತದ್ದಂತೆ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿಯಿದ್ದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ರಬ್ಬರ್ ತಣ್ಣಗಾದ ಬಳಿಕ ಸಹಜವಾಗಿಯೇ ಮೆಟ್ರೋ ಪ್ರಯಾಣವನ್ನು ಮರು ಪ್ರಾರಂಭಿಸಲಾಯಿತು. ಘಟನೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದಾಗಿ ಆ ಮಾರ್ಗದ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪರದಾಡುವಂತಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಅಧಿಕಾರಿಗಳು, ಬಿಸಿಲಿನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡಿತ್ತು. ಚಾಲಕನ ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಬಿಸಿಲಿನ ಝಳದಿಂದ ರಬ್ಬರ್‌ಗೆ ಕಿಡಿ ತಾಗಿರಬಹುದು. ವಿದ್ಯುತ್ ಅಥವಾ ರಬ್ಬರ್‌ನಲ್ಲಿನ ಸಮಸ್ಯೆಯಿಂದಲೂ ಆಗಿರಬಹುದು. ಉಳಿದಂತೆ ಇಡೀ ದಿನ ಯಾವುದೇ ಸಮಸ್ಯೆಯಿಲ್ಲದೆ ಈ ಮಾರ್ಗದಲ್ಲಿ ರೈಲು ಸಂಚರಿಸಿದೆ ಅಂತಾ ಮಾಹಿತಿ ನೀಡಿದ್ದಾರೆ.