‘ಮೆಟಾ’ ಉದ್ಯೋಗಿಗಳ ಮೇಲೆ ಮತ್ತೆ ‘ವಜಾಸ್ತ್ರ’ – ಟರ್ಮಿನೇಟ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?
ಆರ್ಥಿಕ ಹೊಡೆತವೋ ಟಾರ್ಗೆಟ್ ರೀಚ್ ಆಗ್ತಿಲ್ಲ ಎನ್ನುವ ನೆಪವೋ. ಟೆಕ್ ಸಂಸ್ಥೆಗಳಲ್ಲಿ ಉದ್ಯೋಗಿಗಳ ಮೇಲಿನ ‘ವಜಾಸ್ತ್ರ’ ಸರಣಿ ಮುಂದುವರಿದಿದೆ. ಗೂಗಲ್, ಮೈಕ್ರೋಸಾಫ್ಟ್, ಅಮೇಜಾನ್, ಇಂಟೆಲ್, ಜೂಮ್ ಸೇರಿದಂತೆ ಹಲವು ಕಂಪನಿಗಳು ಈಗಾಗ್ಲೇ ಸಾವಿರಾರು ನೌಕರರನ್ನು ಕೆಲಸದಿಂದ ತೆಗೆದಿವೆ. ಇದೀಗ ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣ ಕಂಪನಿಯಾದ ಮೆಟಾ ಮತ್ತೊಮ್ಮೆ ನೌಕರರನ್ನ ಟರ್ಮಿನೇಟ್ ಮಾಡೋಕೆ ಸಜ್ಜಾಗಿದೆ.
ಇದನ್ನೂ ಓದಿ : ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!
ಫೇಸ್ಬುಕ್ (Facebook) ಹಾಗೂ ಇನ್ಸ್ಟಾಗ್ರಾಂ (Instagram) ಮಾತೃಕಂಪನಿ ಮೆಟಾ (Meta) ಮತ್ತೆ ತನ್ನ ಉದ್ಯೋಗಿಗಳನ್ನು (Employees) ಕಡಿತಗೊಳಿಸಲು ಮುಂದಾಗಿದೆ. ಈ ವಾರದಲ್ಲಿ ಮೆಟಾ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲಿದೆ (Layoff) ಎಂಬ ಮಾಹಿತಿ ಹೊರಬಿದ್ದಿದೆ. ವಿಶ್ವದ ಅತಿ ದೊಡ್ಡ ಸಾಮಾಜಿಕ ನೆಟ್ವರ್ಕಿಂಗ್ ಕಂಪನಿಯಾಗಿರುವ ಮೆಟಾ ಕಳೆದ ವರ್ಷ ನವೆಂಬರ್ನಲ್ಲಿ ಶೇ.13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸುಮಾರು 11,000 ಉದ್ಯೋಗಿಗಳನ್ನು ಕಂಪನಿ ಮೊದಲ ಬಾರಿಗೆ ವಜಾಗೊಳಿಸಿತ್ತು. ಇದೀಗ ಮತ್ತೆ ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲು ಕಂಪನಿ ಯೋಜಿಸಿದೆ.
ಮೆಟಾ ಕಂಪನಿಯಲ್ಲಿ ಈ ವಾರದಲ್ಲಿಯೇ ವಜಾ ಪ್ರಕ್ರಿಯೆ ಪ್ರಾರಂಭವಾಗಿ ಮುಂದಿನ ವಾರದಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗ್ಗೆ ಮೆಟಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ಕಂಪನಿ ಉದ್ಯೋಗಿಗಳ ಕಾರ್ಯಕ್ಷಮತೆಯ ಬಗ್ಗೆ ವಿಮರ್ಶೆ ಮಾಡಿದ್ದು, ಇದು ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಕೆಲ ಉದ್ಯೋಗಿಗಳಿಗೆ ಕಾರ್ಯಕ್ಷಮತೆಯ ಬಗ್ಗೆ ಕಡಿಮೆ ರೇಟಿಂಗ್‌ಗಳನ್ನು ನೀಡಿದ್ದು, ಅವರಲ್ಲಿ ಹೆಚ್ಚಿನವರು ಉದ್ಯೋಗ ತೊರೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.