1986ರಲ್ಲಿ ನಾಪತ್ತೆಯಾಗಿದ್ದ ಪರ್ವತಾರೋಹಿಯ ಶವ ಪತ್ತೆ – 37 ವರ್ಷಗಳ ಬಳಿಕ ಮೃತದೇಹ ಪತ್ತೆಯಾಗಿದ್ದು ಎಲ್ಲಿ?
ಜೆರ್ಮಾಟ್: ಸುಮಾರು 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪರ್ವತಾರೋಹಿಯೊಬ್ಬರ ಮೃತದೇಹ ಕಡೆಗೂ ಪತ್ತೆಯಾಗಿದೆ. ಸ್ವಿಸ್ ಆಲ್ಪ್ಸ್‌ನಲ್ಲಿನ ಕರಗುತ್ತಿರುವ ನೀರ್ಗಲ್ಲಿನಲ್ಲಿ ಪರ್ವತಾರೋಹಿಯ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
1986 ರಲ್ಲಿ ಜಪಾನ್ ಪರ್ವತಾರೋಹಿಯೊಬ್ಬರು ಸ್ವಿಟ್ಜರ್ಲೆಂಟ್‌ನ ಜೆರ್ಮಾಟ್‌ನಲ್ಲಿನ ಥಿಯೋಡುಲ್ ಗ್ಲೇಸಿಯರ್ ಗೆ ತೆರಳಿದ್ದರು. ಬಳಿಕ ಅಲ್ಲಿಂದ ವಾಪಸ್ ಬಂದಿರಲಿಲ್ಲ. ಹೀಗಾಗಿ ಆ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ವ್ಯಕ್ತಿಯ ಮೃತದೇಹ ಸ್ವಿಟ್ಜರ್ಲೆಂಟ್‌ನ ಜೆರ್ಮಾಟ್‌ನಲ್ಲಿನ ಥಿಯೋಡುಲ್ ಗ್ಲೇಸಿಯರ್‌ನಲ್ಲಿ ಪರ್ವತಾರೋಹಿಗಳ ತಂಡಕ್ಕೆ ಜುಲೈ 12ರಂದು ಕಾಣಿಸಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: 18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಕೆನಡಾ ಪ್ರಧಾನಿ
ಮೃತದೇಹದ ಭಾಗಗಳನ್ನು ಸಮೀಪದ ಸಿಯಾನ್ ಪಟ್ಟಣದ ವಲೈಸ್ ಆಸ್ಪತ್ರೆಯಲ್ಲಿನ ವಿಧಿ ವಿಜ್ಞಾನ ಔಷಧ ವಿಭಾಗಕ್ಕೆ ಕಳುಹಿಸಲಾಗಿತ್ತು. ಇದು 1986ರಲ್ಲಿ ನಾಪತ್ತೆಯಾಗಿದ್ದ 38 ವರ್ಷದ ಪರ್ವತಾರೋಹಿಯ ಶವ ಎನ್ನುವುದು ಡಿಎನ್‌ಎ ವಿಶ್ಲೇಷಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1986ರಿಂದ ಕಣ್ಮರೆಯಾಗಿದ್ದ ಪರ್ವತಾರೋಹಿಯ ಗುರುತಿಸಲು ಡಿಎನ್‌ಎ ವಿಶ್ಲೇಷಣೆ ನೆರವಾಗಿದೆ. 1986ರ ಸೆಪ್ಟೆಂಬರ್‌ನಲ್ಲಿ 38 ವರ್ಷದ ಜರ್ಮನ್ ಪರ್ವತಾರೋಹಿ, ಪರ್ವತವೊಂದರಿಂದ ಮರಳಿ ಬಾರದಿದ್ದರಿಂದ ನಾಪತ್ತೆಯಾಗಿದ್ದಾನೆ ಎಂದು ವರದಿ ಮಾಡಲಾಗಿತ್ತು. ಇದೀಗ ಆತನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ವತಾರೋಹಿಯ ಹೆಸರನ್ನಾಗಲೀ, ಆತನ ಸಾವಿನ ಸನ್ನಿವೇಶಗಳ ಕುರಿತಾಗಲೀ ಪೊಲೀಸರು ಯಾವುದೇ ಹೆಚ್ಚುವರಿ ಮಾಹಿತಿ ನೀಡಿಲ್ಲ. ಆದರೆ ನಾಪತ್ತೆಯಾಗಿದ್ದ ವ್ಯಕ್ತಿಗೆ ಸಂಬಂಧಿಸಿದ ಉದ್ದನೆಯ ಹೈಕಿಂಗ್ ಬೂಟ್ ಮತ್ತು ಹಿಮದ ಅಡಿಯಲ್ಲಿ ಇದ್ದ ಕ್ರ್ಯಾಂಪಾನ್ಸ್‌ನ ಚಿತ್ರವನ್ನು ಪೊಲೀಸರು ಪ್ರಕಟಿಸಿದ್ದಾರೆ.
ಕರಗುತ್ತಿರುವ ನೀರ್ಗಲ್ಲುಗಳಿಂದಾಗಿ, ದಶಕಗಳ ಹಿಂದೆ ಕಣ್ಮರೆಯಾದ ಪರ್ವತಾರೋಹಿಗಳನ್ನು ಬೆಳಕಿಗೆ ತರುವುದು ಹೆಚ್ಚುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಅಲೆಟ್ಸ್ಕ್ ನೀರ್ಗಲ್ಲುವಿನಲ್ಲಿ 1968ರಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷ ದೊರಕಿತ್ತು. 1970ರಲ್ಲಿ ಭಾರಿ ಹಿಮಪಾತದ ನಡುವೆ ಮಾಟೆನ್‌ಹಾರ್ನ್‌ನಲ್ಲಿ ಕಾಣೆಯಾಗಿದ್ದ ಜಪಾನ್‌ನ ಇಬ್ಬರು ಯುವ ಪರ್ವತಾರೋಹಿಗಳ ದೇಹದ ಭಾಗಗಳು 2015ರಲ್ಲಿ ಸಿಕ್ಕಿದ್ದವು. ಅವರ ಸಂಬಂಧಿಕರ ಡಿಎನ್‌ಎ ಮಾದರಿ ಪರೀಕ್ಷೆಯಿಂದ ಅವರ ಗುರುತುಗಳನ್ನು ಖಚಿತಪಡಿಸಿಕೊಳ್ಳಲಾಗಿತ್ತು. 2014ರಲ್ಲಿ ಬ್ರಿಟಿನ್‌ನ ಪರ್ವತಾರೋಹಿ ಜೊನಾಥನ್ ಕಾನ್ವಿಲ್ಲೆ ಅವರ ದೇಹವನ್ನು ಹೆಲಿಕಾಪ್ಟರ್ ಪೈಲಟ್ ಪತ್ತೆ ಮಾಡಿದ್ದರು. ಕಾನ್ವಿಲ್ಲೆ ಅವರು 1979ರಲ್ಲಿ ಮ್ಯಾಟೆನ್‌ಹಾರ್ನ್‌ನಲ್ಲಿ ನಾಪತ್ತೆಯಾಗಿದ್ದರು.