ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಒಂದೇ ಪರಿಹಾರ – ವಿವಾದಕ್ಕೆ ಕಾರಣವಾಯ್ತು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ!
ಬೆಂಗಳೂರು: ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಕರ್ನಾಟಕ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಆದ್ರೆ ಪ್ರತಿಭಟನಾಕಾರರ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರುವ ಹೇಳಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಒಂದೇ ಪರಿಹಾರ. ಇದರಲ್ಲಿ ರಾಜಕಾರಣ ಮಾಡೋದ್ರಲ್ಲಿ ಪ್ರಯೋಜನ ಇಲ್ಲ. ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡುತ್ತಿರುವ ಸಂಘಟನೆಗಳಾಗಲಿ, ಬಿಜೆಪಿ ಜೆಡಿಎಸ್ ನಾಯಕರು ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನ ಆಗ್ರಹಿಸುತ್ತಿಲ್ಲ. ಪರಿಸರ ಇಲಾಖೆಯಿಂದ ಯಾಕೆ ಅನುಮತಿ ಕೊಡಿಸಲಿಲ್ಲ. ಈಗ ಹೋರಾಟ ಮಾಡುತ್ತಿರುವವರು ಕೇಂದ್ರದ ವಿರುದ್ಧವೂ ಹೋರಾಟ ಮಾಡಬೇಕಲ್ಲವೇ ಎಂದಿದ್ದಾರೆ.
ಇದನ್ನೂ ಓದಿ: ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್‌ಗೆ, ಸದಾ ಬೇರೆಯವರದ್ದೇ ಚಿಂತೆ – ಬಿಜೆಪಿ ವ್ಯಂಗ್ಯ
ಡಿಕೆಶಿಯವರ ಈ ಹೇಳಿಕೆಗೆ ಪ್ರತಿಭಟನಾ ನಿರತ ಸಂಘಟನೆಗಳ ನಾಯಕರು ಆಕ್ರೋಶಗೊಂಡಿದ್ದಾರೆ. ಮತ್ತೊಂದೆಡೆ ಸಾವಿರಾರು ಮಹಿಳೆಯರು ಮತ್ತು ವಿವಿಧ ರೈತಪರ ಸಂಘಟನೆಗಳ ಸದಸ್ಯರು ಇವತ್ತು ಕೆಆರ್ ಎಸ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದ್ದಾರೆ. ಮತ್ತೊಂದೆಡೆ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಇದೀಗ ಅಂತಿಮವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.