ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲು CWMA ಆದೇಶ – ಸುಪ್ರೀಂ ಮೆಟ್ಟಿಲೇರಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ
ಮಳೆ ಕೊರತೆ ನಡುವೆಯೂ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಯ್ತು. ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಮತ್ತು ಸರ್ವಪಕ್ಷಗಳ ಸಂಸದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸಭೆ ನಡೆಸಿದ್ರು.
ತಮಿಳುನಾಡಿಗೆ ಕಾವೇರಿ ನೀರು ಹರಿಸದೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಈ ನಿರ್ಣಾಯಕ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ನಾರಾಯಣಸ್ವಾಮಿ, ರಾಜೀವ್ ಚಂದ್ರಶೇಖರ್ ಮತ್ತು ಇತರ ಸುಪ್ರೀಂ ಕೋರ್ಟ್ ವಕೀಲರು ಭಾಗವಹಿಸಿದ್ದರು. ಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ನಿರ್ಧಾರಗಳ ಕುರಿತು ಚರ್ಚಿಸಲಾಯ್ತು.
ಇದನ್ನೂ ಓದಿ : ವಯಸ್ಕರಿಗೆ ಹೋಲಿಸಿದರೆ ಮಕ್ಕಳಿಗೆ ನಿಫಾ ವೈರಸ್ ಕಂಟಕ – ಮಕ್ಕಳ ವಿಚಾರದಲ್ಲಿ ಪೋಷಕರಿಗೂ ಇರಲಿ ಎಚ್ಚರ..!
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ಸೆಪ್ಟೆಂಬರ್ 26 ರವರೆಗೆ 5,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಕಾವೇರಿ ನದಿ ನೀರು ಬಿಡುಗಡೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದೆಹಲಿಯ ತಾಜ್ ಹೋಟೆಲ್ ನಲ್ಲಿ ಇಂದು ಕರ್ನಾಟಕದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ಜತೆ ಸಭೆ ಮಾಡಿದ್ದು, ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯದಲ್ಲಿ ಕುಡಿಯುವ ನೀರು ಮತ್ತು ರೈತರಿಗೆ ಅಭಾವ ಇರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರವು (CWMA) ಅದೇಶಿರುವುದರಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೇ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭೆಯಲ್ಲಿ ರಾಜ್ಯದ ಎಲ್ಲ ಪಕ್ಷದ ಸಂಸದರು, ಕೇಂದ್ರ ಸಚಿವರು ಭಾಗಿಯಾಗಿದ್ದರು. ಅನ್ಯ ಕೆಲಸ ಹಿನ್ನೆಲೆ ವಿತ್ತ ಸಚಿವೆ ನಿರ್ಮಲಾ ಸಭೆಗೆ ಬಂದಿರಲಿಲ್ಲ. ರಾಜ್ಯದಲ್ಲಿ ಮಳೆ ಕೊರತೆಯಿಂದ ಡ್ಯಾಮ್ಗಳಲ್ಲಿ ನೀರು ಇಲ್ಲ. 123 ವರ್ಷಗಳಲ್ಲಿ ಎಂದೂ ಇಷ್ಟು ಮಳೆ ಕೊರತೆ ಆಗಿರಲಿಲ್ಲ. ರಾಜ್ಯದ ಕಾವೇರಿ ನದಿ ನೀರು ವಿಚಾರದಲ್ಲಿ ಸಂಕಷ್ಟ ಸೂತ್ರ ಅಗತ್ಯ. ಸಂಕಷ್ಟದ ಸೂತ್ರ ಏನು ಎನ್ದುನುವು ತಯಾರಿಯಾಗಿಲ್ಲ. ಇದು ದುರದುಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಸಂಕಷ್ಟ ಸೂತ್ರ ಸಿದ್ದವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ನಮಗೆ ಈಗ ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕದ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ. ಈ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞ ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದರು.
ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಕಾವೇರಿ ನೀರು ವಿಚಾರವಾಗಿ ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಸಭೆಯಲ್ಲಿ ಎಲ್ಲ ಪಕ್ಷದ ಸಂಸದರು, ಜನಪ್ರತಿನಿಧಿಗಳು ಭಾಗಿಯಾಗಿದ್ದು, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಮರೆತು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಇಂದು ಸಂಜೆ 4 ಗಂಟೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಎಲ್ಲರೂ ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.