ಬೆಂಗಳೂರಿನಲ್ಲಿ ಬುಧವಾರ ಮಾಂಸ ಮಾರಾಟ ನಿಷೇಧ – ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪನೆಗೆ ಬಿಬಿಎಂಪಿ ಮನವಿ

ಬೆಂಗಳೂರಿನಲ್ಲಿ ಬುಧವಾರ ಮಾಂಸ ಮಾರಾಟ ನಿಷೇಧ – ಪರಿಸರ ಸ್ನೇಹಿ ಗಣೇಶ ಮೂರ್ತಿ ಸ್ಥಾಪನೆಗೆ ಬಿಬಿಎಂಪಿ ಮನವಿ

ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಜೊತೆಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಇದನ್ನೂ ಓದಿ:ನಾಡಿನಾದ್ಯಂತ ಸ್ವರ್ಣಗೌರಿ ವ್ರತ ಆಚರಣೆ – ಹಬ್ಬದ ಹಿನ್ನೆಲೆ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಆಗಸ್ಟ್ 27ಕ್ಕೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಗಣೇಶ ಚತುರ್ಥಿಯ ಅಂಗವಾಗಿ ಬುಧವಾರ ಬೆಂಗಳೂರಿನಾದ್ಯಂತ ಪ್ರಾಣಿ ವಧೆ, ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ. ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಈ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳು ಎರಡೂ ಮುಚ್ಚಲ್ಪಟ್ಟಿರಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗಣೇಶ ಚತುರ್ಥಿ ಆಚರಣೆಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಇತ್ತ ಬಿಬಿಎಂಪಿ ಕೂಡ ಪರಿಸರಸ್ನೇಹಿ ಗಣಪನ ಮೂರ್ತಿ ಖರೀದಿಸಿ ಹಬ್ಬ ಆಚರಿಸುವಂತೆ ಕರೆ ನೀಡಿದೆ. ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಿಸಲು ಹಾಸ್ಯ ನಟರಾದ ಪುಷ್ಪ ರಾಜ್ ಬೊಳ್ಳರ್ ರವರು ಹಾಗೂ ಖ್ಯಾತ ನಟಿ ಸಿಂಧು ಲೋಕನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿರುತ್ತಾರೆ ಎಂದು ಎಕ್ಸ್ ಸಂದೇಶದಲ್ಲಿ ಬಿಬಿಎಂಪಿ ತಿಳಿಸಿದೆ.

ಮತ್ತೊಂದೆಡೆ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಕೆ.ಆರ್. ಮಾರ್ಕೆಟ್‌ ತುಂಬಿ ತುಳುಕುತ್ತಿದೆ. ಜನರು ಹೂವು, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲು ಆಗಮಿಸುತ್ತಿದ್ದಾರೆ. ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯಲ್ಲಿ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ, ಈ ಬಾರಿಯ ಏರಿಕೆ ಗಮನಾರ್ಹವಾಗಿದೆ. ಮಲ್ಲಿಗೆ ಹೂವು ಕೆಜಿಗೆ 1200 ರೂಪಾಯಿಗಳು, ಸೇವಂತಿ 500-600 ರೂಪಾಯಿಗಳು, ಚೆಂಡು ಹೂವು 100 ರೂಪಾಯಿಗಳು, ಸುಗಂಧರಾಜ 400 ರೂಪಾಯಿಗಳು ಮತ್ತು ಕನಕಾಂಬರ 2500 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಬಾಳೆಕಂದು ಒಂದಕ್ಕೆ 20 ರೂಪಾಯಿಗಳು ಮತ್ತು ಮಾವಿನ ಸೊಪ್ಪಿನ ಚಿಕ್ಕ ಕಂಟೆಗೂ 20 ರೂಪಾಯಿ ಇದೆ.

Sulekha