ಡಿಕೆಶಿಯನ್ನ ಕಂಪ್ಲೀಟ್ ‘ಡಿಸ್ಟರ್ಬ್’ ಮಾಡಿದ ಎಂ.ಬಿ ಪಾಟೀಲ್ – ‘ಕೈ’ ಮನೆಯಲ್ಲಿ ಮತ್ತೆ ಸಿಎಂ ಕಿಚ್ಚು!

ಡಿಕೆಶಿಯನ್ನ ಕಂಪ್ಲೀಟ್ ‘ಡಿಸ್ಟರ್ಬ್’ ಮಾಡಿದ ಎಂ.ಬಿ ಪಾಟೀಲ್ – ‘ಕೈ’ ಮನೆಯಲ್ಲಿ ಮತ್ತೆ ಸಿಎಂ ಕಿಚ್ಚು!

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಗಾಗಿ 5 ದಿನಗಳ ಕಾಲ ಹೈಕಮಾಂಡ್ ಅಂಗಳದಲ್ಲಿ ಮದಗಜಗಳಂತೆ ಕಾದಾಡಿದ್ರು. ಕೊನೆಗೆ ಸಿದ್ದರಾಮಯ್ಯರನ್ನ ಸಿಎಂ ಮಾಡಿ ಡಿ.ಕೆ ಶಿವಕುಮಾರ್​ಗೆ ಡಿಸಿಎಂ ಪಟ್ಟ ಕಟ್ಟುವಷ್ಟರಲ್ಲಿ ಕಾಂಗ್ರೆಸ್ ನಾಯಕರಿಗೆ ಸಾಕು ಸಾಕಾಗಿ ಹೋಗಿತ್ತು. ಹಂಗೂ ಹಿಂಗೂ ಸಿಎಂ ಕಸರತ್ತು ಮುಗಿಸಿ ಸರ್ಕಾರ ರಚನೆ ಮಾಡಿ ಸಂಪುಟ ರಚನೆಗೆ ಸಜ್ಜಾಗುತ್ತಿರುವಾಗ್ಲೇ ಮತ್ತೆ ಸಿಎಂ ಬಾಂಬ್ ಸಿಡಿದಿದೆ. ಕಾಂಗ್ರೆಸ್ ಮನೆಯಲ್ಲಿ ಬೆಂಕಿ ಹೊತ್ತಿಸಿದ್ದು ಇದೇ ಬೆಂಕಿಯಲ್ಲಿ ಬಿಜೆಪಿ ನಾಯಕರೂ ಕೂಡ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕಾಡ್ಗಿಚ್ಚು ಮತ್ತೆ ಸ್ಫೋಟವಾಗಿದೆ. ಹಿರಿಯ ಶಾಸಕ ಎಂ.ಬಿ ಪಾಟೀಲ್ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯರೇ 5 ವರ್ಷ ಸಿಎಂ ಎಂಬ ಪಾಟೀಲರ ಹೇಳಿಕೆ ಕಾಂಗ್ರೆಸ್ ಪಾಳೆಯದಲ್ಲಿ ಕಿಚ್ಚು ಹಚ್ಚಿದೆ. ಸೋಮವಾರ ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷ ಪೂರ್ಣಾವಧಿ ಸಿಎಂ ಆಗಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಸಿಎಂ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಎಐಸಿಸಿ ಮಟ್ಟದಲ್ಲೂ ಯಾವುದೇ ಚರ್ಚೆ ನಡೆದಿಲ್ಲ ಎಂದಿದ್ದರು. ಪಾಟೀಲರು ಸೋಮವಾರ ಆಡಿದ್ದ ಇದೇ ಮಾತು ಮಂಗಳವಾರ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಇದನ್ನೂ ಓದಿ : ‘ರೈತ ಸಂಘ ಬೆಂಬಲಿಸಿದ್ದರಿಂದಲೇ ಬಿಜೆಪಿಗೆ ಸೋಲು’ – ಸಂಸದೆ ಸುಮಲತಾ ವಿರುದ್ಧ ಇಂದ್ರೇಶ್ ಕಿಡಿ!

ಪಾಟೀಲರ ವಿರುದ್ಧ ಡಿಕೆ ಬ್ರದರ್ಸ್ ಕೆಂಡಮಂಡಲರಾಗಿದ್ದಾರೆ. ಎಂ.ಬಿ ಪಾಟೀಲ್ ಹೇಳಿಕೆ ಬಗ್ಗೆ ಮಾತನಾಡಿರುವ ಡಿಕೆಶಿ, ಯಾರು ಏನ್ ಬೇಕಾದ್ರೂ ಮಾತಾಡಿಕೊಳ್ಳಲಿ, ಎಐಸಿಸಿ ಜನರಲ್ ಸೆಕ್ರೆಟರಿ, ಎಐಸಿಸಿ ಅಧ್ಯಕ್ಷರು ಇದ್ದಾರೆ, ಮುಖ್ಯಮಂತ್ರಿಗಳು ಇದ್ದಾರೆ. ಅವ್ರೇ ನೋಡಿಕೊಳ್ತಾರೆ ಎಂದಿದ್ದಾರೆ. ಇತ್ತ ಡಿಕೆಶಿ ಸೋದರ ಡಿ.ಕೆ ಸುರೇಶ್ ನೇರವಾಗಿಯೇ ಎಂಬಿ ಪಾಟೀಲ್​ಗೆ ಎಚ್ಚರಿಕೆ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಬೇಕಂದ್ರೆ ಸುರ್ಜೇವಾಲ ಹತ್ತಿರ ಮಾತಾಡಿ. ಎಂ.ಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ಕೊಡಲು ನನಗೂ ಬರುತ್ತದೆ. ಅವ್ರಿಗೆ ಹೇಳಿ ಇದೆಲ್ಲಾ ಬೇಡ ಎಂದು ಕಿಡಿ ಕಾರಿದ್ದಾರೆ. ಇನ್ನು ಶಾಸಕ ಅಜಯ್ ಸಿಂಗ್ ಮಾತನಾಡಿ, ಸಿಎಂ ಪವರ್ ಶೇರಿಂಗ್ ಬಗ್ಗೆ ನಮ್ಮಲ್ಲಿ ಏನೂ ಚರ್ಚೆ ಆಗಿಲ್ಲ. ಸದ್ಯಕ್ಕೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡೋದಷ್ಟೇ ನಮ್ಮ ಕೆಲಸ ಎಂದಿದ್ದಾರೆ. ಪಾಟೀಲರ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿರೋಧ ವ್ಯಕ್ತಪಡಿಸಿದ್ದಾರೆ. ಏನೇ ಮಾತುಕತೆ ಆಗಿದ್ರೂ ಎಐಸಿಸಿ ಅಧ್ಯಕ್ಷರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ಆಗಿದೆ. ವರಿಷ್ಠರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ ಎಂದು ಕಿಡಿ ಕಾರಿದ್ದಾರೆ.

ಮತ್ತೊಂದೆಡೆ ಎಂ.ಬಿ ಪಾಟೀಲರ ಹೇಳಿಕೆ ಬಿಜೆಪಿ ಬಾಯಿಗೆ ಲಡ್ಡು ಬಂದು ಬಿದ್ದಂತಾಗಿದೆ. ಸಿಎಂ ಕುಸ್ತಿ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮಯ್ಯನವರು ಬಿಡುವುದೂ ಇಲ್ಲ. ಎಂ.ಬಿ ಪಾಟೀಲ್ ಈ ಹೇಳಿಕೆ ಮೂಲಕ ಡಿ.ಕೆ ಶಿವಕುಮಾರ್​ಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರಷ್ಟೇ ಎಂದು ಕಾಲೆಳಿದಿದೆ.

ಅಷ್ಟಕ್ಕೂ ಎಂಬಿ ಪಾಟೀಲ್ ಹೀಗೆ ಸಡನ್ನಾಗಿ 5 ವರ್ಷ ಸಿಎಂ ಬಾಂಬ್ ಸಿಡಿಸೋಕೆ ಕಾರಣ ಕಳೆದ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಅದೊಂದು ಘಟನೆ ಎನ್ನಲಾಗ್ತಿದೆ. ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ ಭಾಷಣ ಮಾಡುತ್ತಿದ್ರು. ಈ ವೇಳೆ ಸಚಿವ ಎಂ.ಬಿ.ಪಾಟೀಲ್ ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಡಿಕೆಶಿ ಎಂ.ಬಿ ಪಾಟೀಲ್​ರತ್ತ ತಿರುಗಿ ನಾನು ಮಾತನಾಡುತ್ತಿದ್ದೀನಿ ಡೋಂಟ್ ಡಿಸ್ಟರ್ಬ್, ಇದು ನನ್ನ ಮೊದಲ ಮೆಸೇಜ್ ಅಂದಿದ್ರು. ಇದ್ರಿಂದ ಸಹಜವಾಗಿಯೇ ಎಂಬಿಪಿ ಮುಜುಗರಕ್ಕೆ ಒಳಗಾಗಿದ್ರು. ಇದಾದ ಮಾರನೇ ದಿನವೇ ಅಂದ್ರೆ ಸೋಮವಾರ ಪೂರ್ಣಾವಧಿ ಸಿಎಂ ಬಾಂಬ್ ಸಿಡಿಸಿದ್ದು ಡೋಂಟ್ ಡಿಸ್ಟರ್ಬ್ ಎಂದಿದ್ದ ಡಿಕೆಶಿಯನ್ನ ಕಂಪ್ಲೀಟ್ ಡಿಸ್ಟರ್ಬ್ ಆಗುವಂತೆ ಮಾಡಿದ್ದಾರೆ.

suddiyaana