ಪಾರ್ವತಿ ದೇವಿಯೇ ಶಿವಲಿಂಗವನ್ನ ಪ್ರತಿಷ್ಠಾಪಿಸಿದ್ದೇಕೆ – ಮಯೂರನಾಥ ಸ್ವಾಮಿ ದೇವಾಲಯದ ಇತಿಹಾಸವನ್ನ ಒಮ್ಮೆ ಕೇಳಿ

ಪಾರ್ವತಿ ದೇವಿಯೇ ಶಿವಲಿಂಗವನ್ನ ಪ್ರತಿಷ್ಠಾಪಿಸಿದ್ದೇಕೆ –   ಮಯೂರನಾಥ ಸ್ವಾಮಿ ದೇವಾಲಯದ ಇತಿಹಾಸವನ್ನ ಒಮ್ಮೆ ಕೇಳಿ

ತಮಿಳುನಾಡನ್ನ  “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ.  ಮೈಲಾಡುತುರೈನಲ್ಲಿ ಇರುವ ಮಯೂರನಾಥ ಸ್ವಾಮಿ ದೇವಾಲಯವೂ ತನ್ನ ಪುರಾತನತೆ, ವೈಶಿಷ್ಟ್ಯಮಯ ಪುರಾಣ ಕಥೆಗಳು ಮತ್ತು ಭವ್ಯ ವಾಸ್ತುಶಿಲ್ಪದಿಂದ ವಿಶೇಷ ಸ್ಥಾನ ಪಡೆದಿದೆ. ಇದು ಕೇವಲ ಭಕ್ತರಿಗಷ್ಟೇ ಅಲ್ಲದೆ ಇತಿಹಾಸ ಮತ್ತು ಸಂಸ್ಕೃತಿ ಪ್ರಿಯರಿಗೂ ಆಕರ್ಷಕ ತಾಣವಾಗಿದೆ.

ಈ ದೇವಾಲಯದ ಅತ್ಯಂತ ವಿಶಿಷ್ಟ ಅಂಶವೆಂದರೆ, ಇಲ್ಲಿ ಶಿವನು ‘ಮಯೂರನಾಥ’ ರೂಪದಲ್ಲಿ ಪೂಜಿಸಲ್ಪಡುವುದು. ಪುರಾಣಗಳ ಪ್ರಕಾರ, ಪಾರ್ವತಿ ದೇವಿಯೇ ನವಿಲಿನ ರೂಪದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾಳೆ. ದಕ್ಷ ಪ್ರಜಾಪತಿಯ ಯಜ್ಞದಲ್ಲಿ ಉಂಟಾದ ಅವಮಾನ ಮತ್ತು ಆತ್ಮಶುದ್ಧಿಗಾಗಿ ಪಾರ್ವತಿ ದೇವಿ ತಪಸ್ಸು ಮಾಡಿ, ತನ್ನ ಮುಂದಿನ ಜನ್ಮದಲ್ಲಿ ನವಿಲಾಗಿ ಹುಟ್ಟಿ ಶಿವನ ಆರಾಧನೆ ಮಾಡಿದಳು ಎಂದು ಕಥೆಗಳು ಹೇಳುತ್ತವೆ. ಈ ಕಾರಣದಿಂದಲೇ ‘ಮಯೂರ’ (ನವಿಲು) + ‘ನಾಥ’ (ಶಿವ) ಎಂಬ ಹೆಸರಿನಿಂದ ದೇವಾಲಯಕ್ಕೆ ಮಯೂರನಾಥ ಎಂದು ಹೆಸರು ಬಂದಿದೆ. ಇಲ್ಲಿ ಪಾರ್ವತಿ ದೇವಿಯನ್ನು ಅಭಯಾಂಬಿಕಾ ಮತ್ತು ಅಭಯಪ್ರದಾಂಬಿಕಾ ಎಂದು ಪೂಜಿಸಲಾಗುತ್ತದೆ. 

ಮಯೂರನಾಥ ದೇವಾಲಯವು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಮೈಲಾಡುತುರೈ (ಹಿಂದೆ ಮಾಯಾವರಂ) ಪಟ್ಟಣದಲ್ಲಿ ಇದೆ. ಭವ್ಯವಾದ ಒಂಬತ್ತು ಅಂತಸ್ತಿನ ರಾಜಗೋಪುರ, ಸುಂದರ ಶಿಲ್ಪಗಳು, ಸೂಕ್ಷ್ಮವಾದ ಕಲ್ಲಿನ ಕೆತ್ತನೆಗಳು ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಈ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ. ಪ್ರಾಚೀನ ಶಾಸನಗಳ ಪ್ರಕಾರ, ಈ ದೇವಾಲಯವನ್ನು ಚೋಳರ ಕಾಲದಲ್ಲಿ, ಕ್ರಿ.ಶ. 9ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಶಿಲ್ಪಕಲೆ ಮತ್ತು ಕಟ್ಟಡ ವಿನ್ಯಾಸದಲ್ಲಿ ಆ ಕಾಲದ ಕಲಾತ್ಮಕ ಮೆರುಗು ಸ್ಪಷ್ಟವಾಗಿ ಕಾಣಿಸುತ್ತದೆ.

ಈ ಕ್ಷೇತ್ರಕ್ಕೆ ಆಧ್ಯಾತ್ಮಿಕ ಮಹತ್ವವೂ ಅಪಾರವಾಗಿದೆ. ದೇವಾಲಯದ ಆವರಣದಲ್ಲಿ ಪಾರ್ವತಿ ದೇವಿ ಆಲದ ಮರದ ಕೆಳಗೆ ತಪಸ್ಸು ಮಾಡಿದಳು ಎಂದು ನಂಬಲಾಗುತ್ತದೆ. ಹತ್ತಿರದ ಕಾವೇರಿ ನದಿ ಮತ್ತು ವೃಷಭ ತೀರ್ಥ ಸಂಗಮವನ್ನು ‘ದಕ್ಷಿಣ ತ್ರಿವೇಣಿ ಸಂಗಮ’ ಎಂದು ಕರೆಯುತ್ತಾರೆ. ಪ್ರತಿ ಹುಣ್ಣಿಮೆಯಂದು ಇಲ್ಲಿ ಸ್ನಾನ ಮಾಡಿದರೆ ಪಾಪಕ್ಷಯ ಮತ್ತು ಮನಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

Kishor KV

Leave a Reply

Your email address will not be published. Required fields are marked *