ಟೀಂ ಇಂಡಿಯಾಗೆ IPL ಬೆಂಕಿ ಚೆಂಡು – 156.7 ಕಿ.ಮೀ ವೇಗ.. ಬೌಲಿಂಗ್ ಜಾದೂ
ಬಾಂಗ್ಲಾ ಬೇಟೆಗೆ ಮಯಾಂಕ್ ಯಾದವ್

ಟೀಂ ಇಂಡಿಯಾಗೆ IPL ಬೆಂಕಿ ಚೆಂಡು – 156.7 ಕಿ.ಮೀ ವೇಗ.. ಬೌಲಿಂಗ್ ಜಾದೂಬಾಂಗ್ಲಾ ಬೇಟೆಗೆ ಮಯಾಂಕ್ ಯಾದವ್

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧವೇ ಮೂರು ಟಿ-20 ಪಂದ್ಯಗಳನ್ನ ಆಡಲಿದೆ. ಅಕ್ಟೋಬರ್ 6ರಿಂದ ಚುಟುಕು ಸಮರ ಶುರುವಾಗಲಿದ್ದು, ಇದ್ದಕ್ಕಾಗಿ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಬಿಸಿಸಿಐ 15 ಸದಸ್ಯರ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಜಿತ್ ಅಗರ್ಕರ್ ನೇತೃತ್ವದ ಹಿರಿಯ ಆಯ್ಕೆ ಸಮಿತಿ ಆಯ್ಕೆ ಮಾಡಿರೋ ತಂಡದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಹೆಸ್ರು ಮಯಾಂಕ್ ಯಾದವ್. 2024ರ ಐಪಿಎಲ್ ನೋಡ್ತಿದ್ದವ್ರಿಗೆ ಮಯಾಂಕ್ ಯಾದವ್ ಬೌಲಿಂಗ್ ಸ್ಪೀಡ್ ಬಗ್ಗೆ ಚೆನ್ನಾಗೇ ಗೊತ್ತಿರುತ್ತೆ. ಇದೇ ಕಾರಣಕ್ಕೆ ಕ್ರಿಕೆಟ್ ಲೋಕದಲ್ಲಿ ಮಯಾಂಕ್ ಹೆಸರು ಸದ್ದು ಮಾಡ್ತಿದೆ. ಅಷ್ಟಕ್ಕೂ ಐಪಿಎಲ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವೇಗದ ಬೌಲರ್ ಮಯಾಂಕ್ ಯಾದವ್ ಇದೇ ಮೊದಲ ಬಾರಿಗೆ ಟೀಮ್‌ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಯಾರು ಈ ಮಯಾಂಕ್ ಯಾದವ್ ಅನ್ನೋ ಮಾಹಿತಿ ಇಲ್ಲಿದೆ.

ಮಯಾಂಕ್ ಯಾದವ್ ಮೋಡಿ!

2024ರ ಐಪಿಎಲ್ ನೋಡಿದ ಪ್ರತಿಯೊಬ್ಬರಿಗೂ ಮಯಾಂಕ್ ಯಾದವ್ ನೆನಪಿದ್ದೇ ಇರ್ತಾರೆ. ಇಂಥಾ ಬೆಂಕಿ ಬೌಲರ್ ಟೀಮ ಇಂಡಿಯಾಗೆ ಬರ್ಬೇಕು ಅಂತಾ ಪ್ರಾರ್ಥನೆ ಮಾಡಿದ್ದವ್ರೂ ಇದ್ದಾರೆ. ಅಷ್ಟರ ಮಟ್ಟಿಗೆ ಐಪಿಎಲ್​ನಲ್ಲಿ  ಲಕ್ನೋ ಸೂಪರ್ ಜೈಂಟ್ಸ್ ಪರ ವೇಗದ ಬೌಲರ್‌ ಮಯಾಂಕ್ ಯಾದವ್ ಮಿಂಚಿದ್ದರು. ಗಂಟೆಗೆ 156.7 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆದು ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ್ದ ಮಯಾಂಕ್, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ವೇಳೆ ಗಾಯದಿಂದ ಬಳಲುತ್ತಿದ್ದ ಬಲಗೈ ವೇಗಿ ಟೀಮ್‌ ಇಂಡಿಯಾದಲ್ಲಿ ಅವಕಾಶ ಪಡೆಯುವಲ್ಲಿ ಈವರೆಗೂ ವಿಫಲವಾಗಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಕಣ್ಗಾವಲಿನಲ್ಲಿದ್ದ ಅವರು, ಇದೀಗ ಕೊನೆಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಬಾರಿಗೆ ಟೀಂ ಇಂಡಿಯಾದ ಭಾಗವಾಗಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗದ ಬಾಲ್‌ ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ನಾಲ್ಕು ಪಂದ್ಯಗಳನ್ನು ಆಡಿ 7 ವಿಕೆಟ್ ಪಡೆದಿದ್ದಾರೆ. ಅಲ್ಲದೆ 14 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದು, ಅವರ ಅಮೋಘ ಸಾಧನೆ. ಕಳೆದ ಸೀಸನ್​ನಲ್ಲೇ ಮಯಾಂಕ್ ಅವರ ವೇಗದ ಎಸೆತಗಳ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು. ಇವರು ಐಪಿಎಲ್‌ನಲ್ಲಿ ಗಂಟೆಗೆ 150  ಹೆಚ್ಚಿನ ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದರು. ಐಪಿಎಲ್ 2024 ರ ಸಮಯದಲ್ಲಿ ಗಾಯಕ್ಕೆ ತುತ್ತಾದ ಬಳಿಕ, ಮಯಾಂಕ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಹು ಕಾಲ ಬೆವರು ಹರಿಸಿದ್ದಾರೆ. ಮಯಾಂಕ್ ಯಾದವ್ ಇದುವರೆಗೆ ಲಿಸ್ಟ್ ಎ ನಲ್ಲಿ 17 ಪಂದ್ಯಗಳನ್ನು ಮತ್ತು ಟಿ20 ಯಲ್ಲಿ 14 ಪಂದ್ಯಗಳನ್ನು ಆಡಿದ್ದಾರೆ. ಮಯಾಂಕ್ ಲಿಸ್ಟ್-ಎ ಯಲ್ಲಿ 34 ಮತ್ತು ಟಿ20 ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇನ್ನು ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಿದ್ದಾರೆ. ಆದರೆ, ನಿರೀಕ್ಷೆಯಂತೆ ಟೆಸ್ಟ್ ಆಟಗಾರರಾದ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ಆಯ್ಕೆಯ ಕೀಪರ್ ಹಾಗೂ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿದೆ. ಜಿತೇಶ್ ಶರ್ಮಾ ಅವರನ್ನು ಬ್ಯಾಕಪ್ ಕೀಪರ್ ಆಗಿ ಹೆಸರಿಸಲಾಗಿದೆ. ಸದ್ಯ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್‌ ಸರಣಿ ನಡೆಯುತ್ತಿದೆ. ಈ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆಡಲಿದ್ದು, ಇದಕ್ಕಾಗಿ ಇನ್ನು ತಂಡವನ್ನು ಪ್ರಕಟಿಸಿಲ್ಲ. ಈ ಸರಣಿ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಬಾರ್ಡರ್‌ ಗವಾಸ್ಕರ್‌ ಕ್ರಿಕೆಟ್‌ ಸರಣಿ ನಡೆಯಲಿದೆ. ಈ ಸರಣಿಗೂ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

Shwetha M