ಮಯಾಂಕ್ ಅಗರ್‌ವಾಲ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ – ಸದ್ಯಕ್ಕೆ ಮಾತಾಡಲು ಆಗಲ್ಲ ಎಂದು ಸ್ಪಷ್ಟನೆ

ಮಯಾಂಕ್ ಅಗರ್‌ವಾಲ್‌ಗೆ ಬೆಂಗಳೂರಿನಲ್ಲಿ ಚಿಕಿತ್ಸೆ – ಸದ್ಯಕ್ಕೆ ಮಾತಾಡಲು ಆಗಲ್ಲ ಎಂದು ಸ್ಪಷ್ಟನೆ

ಕರ್ನಾಟಕ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಯಾಂಕ್ ಅಗರ್‌ವಾಲ್ ಅವರನ್ನು ತ್ರಿಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುವಾಗ ತೀವ್ರ ಅಸ್ವಸ್ಥತೆಗೆ ಗುರಿಯಾಗಿದ್ದ ಮಯಾಂಕ್‌ ಅವರಿಗೆ ಅಗರ್ತಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಡಿದಿರುವ ಡ್ರಿಂಕ್ಸ್ ಯಾವುದು ಗೊತ್ತಾ? – ಕನ್ನಡಿಗನ ಅದೃಷ್ಟ ಚೆನ್ನಾಗಿತ್ತು..!

ಕರ್ನಾಟಕ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಯಾಂಕ್ ಅಗರ್‌ವಾಲ್ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಯಾಂಕ್ ಅವರನ್ನು ತ್ರಿಪುರದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಜನವರಿ 31ರಂದು ಇಂಡಿಗೋ ವಿಮಾನದ ಮೂಲಕ ಮಯಾಂಕ್ ಬೆಂಗಳೂರಿಗೆ ಆಗಮಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಯಾಂಕ್ ಅಗರ್‌ವಾಲ್ ಆರೋಗ್ಯದ ಬಗ್ಗೆ ಕರ್ನಾಟಕ ಕ್ರಿಕೆಟ್ ತಂಡದ ಮ್ಯಾನೇಜರ್ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಮಯಾಂಕ್ ಅಗರ್‌ವಾಲ್ ಅವರು ಅಪಾಯದಿಂದ ಪಾರಾಗಿದ್ದಾರೆ. ಥ್ರೋಟ್ ಇನ್ಪೆಕ್ಷನ್ ಆಗಿರುವ ಕಾರಣ ಅವರಿಗೆ ಮಾತನಾಡಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು.

ತ್ರಿಪುರಾದಿಂದ ಸೂರತ್ ಗೆ ಹೋಗುವಾಗ ವಿಮಾನದಲ್ಲಿ ಅನುಮಾನಾಸ್ಪದ ರೀತಿಯ ದ್ರವ ಕುಡಿದ ಪರಿಣಾಮ ಮಯಾಂಕ್ ಅಗರ್‌ವಾಲ್ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರಿಗೆ ಸೂಕ್ತ ಚಿಕಿತ್ಸೆ ಕೂಡಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ತನಿಖೆ ನಂತರ ಏನಾಗಿತ್ತು ಎನ್ನುವುದು ಗೊತ್ತಾಗಲಿದೆ ಎಂದು ಸ್ಪಷ್ಟಪಡಿಸಿದರು.

ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವಾಡಲು ಗುಜರಾತ್‌ಗೆ ತೆರಳಬೇಕಿತ್ತು. ಮಯಾಂಕ್ ಸೇರಿದಂತೆ ಕರ್ನಾಟಕ ತಂಡದ ಆಟಗಾರರು ಸೂರತ್‌ಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ಇಡಲಾಗಿದ್ದ ವಿಷಕಾರಿ ದ್ರವ ಪದಾರ್ಥವನ್ನು ನೀರು ಎಂದು ಮಯಾಂಕ್ ಕುಡಿದಿದ್ದರು. ಇದರ ಬೆನ್ನಲ್ಲೇ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಇದರಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ತ್ರಿಪುರದ ಎಎಲ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ರಿಪೋರ್ಟ್ ವರದಿ ಬಳಿಕ ಮಯಾಂಕ್ ಅಗರ್ವಾಲ್ ತನ್ನ ಮ್ಯಾನೇಜರ್ ಮೂಲಕ ತ್ರಿಪುರದ NCCPS ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಬಗ್ಗೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Sulekha