ಯುಗದ ಅಂತ್ಯವನ್ನೇ ಸೂಚಿಸುವ ಮಾತಂಗೇಶ್ವರ ದೇವಾಲಯ – ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

ಯುಗದ ಅಂತ್ಯವನ್ನೇ ಸೂಚಿಸುವ ಮಾತಂಗೇಶ್ವರ ದೇವಾಲಯ – ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ

ನಮ್ಮ ದೇಶದಲ್ಲಿ ಭಕ್ತಿಯ ಕೇಂದ್ರಗಳು ಸಾಕಷ್ಟಿವೆ. ಪ್ರಸಿದ್ಧ ದೇವಾಲಯಗಳು ಬೇಕಾದಷ್ಟಿವೆ. ಆದ್ರೆ, ಇದ್ರಲ್ಲಿ ಕೆಲವು ದೇಗುಲಗಳ ಇತಿಹಾಸವನ್ನ ಕೆದಕುತ್ತಾ ಹೋದ್ರೆ ಅನೇಕ ರೋಚಕತೆಗಳು ತೆರೆದುಕೊಳ್ಳುತ್ತವೆ. ಒಂದೊಂದು ದೇವಾಲಯದ ನಿರ್ಮಾಣದ ಹಿಂದೆ ಅದರದ್ದೇ ಆದ ಪೌರಾಣಿಕ, ಐತಿಹಾಸಿಕ ಕಥೆಯೂ ಕಾರಣವಾಗಿರುತ್ತೆ. ಆದ್ರೀಗ ನಾವೀಗ ತೋರಿಸುತ್ತಿರೋ ಈ ದೇವಾಲಯ ಇವೆಲ್ಲಕ್ಕಿಂತಲೂ ಭಿನ್ನ. ಇದು ಬರೀ ದೇವಾಲಯವಲ್ಲ.. ಇದು ಈ ಯುಗದ ಅಂತ್ಯವನ್ನೇ ಸೂಚಿಸುವ ದೇವಾಲಯ.. ಇದರಲ್ಲಡಗಿದೆ ಈ ಯುಗದ ಅಂತ್ಯ ಯಾವಾಗ ಆಗುತ್ತೆ ಅನ್ನೋ ರಹಸ್ಯ. ಶಿವರಾತ್ರಿಯ ದಿನ ಈ ವಿಶೇಷ ದೇಗುಲದ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ಆಚರಣೆ ಶುರುವಾಗಿದ್ದೇಕೆ? – ಜಾಗರಣೆಯ ಮಹತ್ವವೇನು?

ಮಧ್ಯಪ್ರದೇಶದ ಖಜುರಾಹೋದಲ್ಲಿರುವ ಮಾತಂಗೇಶ್ವರ ದೇವಲಾಯದಲ್ಲಿ ಹಲವು ವಿಶೇಷತೆಗಳಿವೆ . ಈ ದೇವಸ್ಥಾನದೊಳಗೆ ಕಾಲಿಟ್ಟಾಗ ಕಾಣಿಸುತ್ತದೆ ಒಂದು ನಿಗೂಢ ಶಿವಲಿಂಗ. ಇದು ಕೇವಲ ಭಕ್ತರ ಭಕ್ತಿಯ ಕೇಂದ್ರಬಿಂದುವಲ್ಲ.. ಇದು ದಿನೇ ದಿನೇ ಬೆಳೆಯುತ್ತಿರುವ ಜೀವಂತ ಶಿವಲಿಂಗ. ಇತಿಹಾಸದ ಪ್ರಕಾರ ಈ ಶಿವಲಿಂಗ ಈಗ ಒಂಭತ್ತು ಅಡಿ ಬೆಳೆದಿದೆ. ಪ್ರತಿವರ್ಷ ಶಿವರಾತ್ರಿ ಹಬ್ಬದ ಹಿಂದಿನ ದಿನ ದೇವಸ್ಥಾನಕ್ಕೆ ಸಂಬಂಧ ಪಟ್ಟ ಇಲಾಖೆ, ಸರ್ಕಾರ, ಮತ್ತು ಅರ್ಚಕವರ್ಗ ಈ ಶಿವಲಿಂಗದ ಅಳತೆ ಮಾಡುತ್ತಾರೆ.

ಈ ಶಿವಲಿಂಗ ವರ್ಷದಿಂದ ವರ್ಷಕ್ಕೆ ಕೇವಲ ಒಂದು ಇಂಚಿನಷ್ಟು ಉದ್ದವಾಗಿರುತ್ತದೆ. ಇನ್ನೂ ಒಂದು ಅಚ್ಚರಿಯೆಂದರೆ ಈ ಶಿವಲಿಂಗ ಭಕ್ತರಿಗೆ ಕಾಣಿಸುವಷ್ಟು ಎಷ್ಟು ಉದ್ದವಿದೆಯೋ ಅಷ್ಟೇ ಉದ್ದ ಭೂಮಿಯ ಕೆಳಭಾಗದಲ್ಲೂ ಇದೆಯಂತೆ. ಅಂದರೆ ಇದು ಮೇಲ್ಭಾಗ ಆಕಾಶಕ್ಕೆ ಕೆಳ ಭಾಗ ಪಾತಾಳಕ್ಕೆ ಬೆಳೆಯುತ್ತಿದೆಯಂತೆ. ಯಾವಾಗ ಈ ಶಿವಲಿಂಗ ಪಾತಾಳ ಮುಟ್ಟುತ್ತದೆಯೋ ಅಂದೇ ಈ ಭೂಮಿಯ ವಿನಾಶವಾಗುತ್ತೆ. ಕಲಿಯುಗ ಅಂತ್ಯವಾಗುತ್ತೆ ಅಂತಿದ್ದಾರೆ ಕೆಲವರು.

ಇನ್ನು ಈ ಮಾತಂಗೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಸಂಬಂಧಪಟ್ಟ ಒಂದು ಪೌರಾಣಿಕ ಕಥೆಯೂ ಇದೆ. ಪರಮೇಶ್ವರ ಪಾಂಡವರ ಹಿರಿಯ ಸಹೋದರನಾದ ಯಧಿಷ್ಠಿರನಿಗೆ ಒಂದು ದಿವ್ಯಸ್ವರೂಪದ ಅದ್ಭುತ ರತ್ನವನ್ನ ನೀಡುತ್ತಾನಂತೆ. ಈ ರತ್ನವನ್ನ ಧರ್ಮರಾಯ ಒಮ್ಮೆ ಮಾತಂಗ ಋಷಿಗಳಿಗೆ ನೀಡುತ್ತಾನಂತೆ. ನಂತರ ಮಾತಂಗ ಋಷಿಗಳು ಈ ಅಮೂಲ್ಯ ರತ್ನವನ್ನ ರಾಜ ಹರ್ಷವರ್ಧನನಿಗೆ ನೀಡುತ್ತಾರೆ. ಆದ್ರೆ, ರಾಜ ಅದನ್ನ ಭೂಮಿಯಲ್ಲಿ ಹೂತಿಡುತ್ತಾನೆ. ರಾಜನ ಕಾಲಾನಂತರ ಭೂಮಿಯಲ್ಲಿ ಹೂತಿದ್ದ ವಿಶಿಷ್ಟ ಮಣಿಯನ್ನ ರಕ್ಷಿಸಲು ಆ ಪರಶಿವನೇ ಲಿಂಗದ ರೂಪದಲ್ಲಿ ವಿರಾಜಮಾನನಾಗುತ್ತಾನೆ. ಆ ಮಣಿಯ ಶಕ್ತಿಯಿಂದಲೇ ಶಿವಲಿಂಗ ಜೀವಂತವಾಗಿದೆ. ದಿನೇ ದಿನೇ ಬೆಳೆಯುತ್ತಿದೆ ಎನ್ನಲಾಗ್ತಿದೆ.

ಈ ಸ್ಥಳ ಪುರಾಣದ ಬಗ್ಗೆ ಇನ್ನೂ ಒಂದು ವಿಶಿಷ್ಟಕಥೆಯಿದೆ. ಇತಿಹಾಸದ ಪ್ರಕಾರ ಮಾತಂಗ ಎಂಬ ಋಷಿಯು ಲಿಂಗದ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರು. ಹಾಗೂ ತನ್ನ ಇಷ್ಟ ದೇವತೆಯನ್ನ ನಿಯಂತ್ರಿಸುವಲ್ಲಿ ಮಾತಂಗ ಋಷಿಯು ಸಫಲಾಗಿದ್ದರು. ಹೀಗಾಗಿಯೇ ಈ ದೇವಸ್ಥಾನ ಮಾತಂಗೇಶ್ವರ ದೇವಾಸ್ಥಾನವೆಂದು ಪ್ರಸಿದ್ಧಿ ಪಡೆದಿದೆ ಎಂದು ಇತಿಹಾಸಕಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಸ್ಮಯಕಾರಿ ಲಿಂಗ ನೋಡಲು ಮಾತಂಗೇಶ್ವರ ದೇವಸ್ಥಾನಕ್ಕೆ ಭಕ್ತರು, ದೇಶ ವಿದೇಶದಿಂದ ಪ್ರವಾಸಿಗರ ಬರುತ್ತಾರೆ. ಮಾತಂಗೇಶ್ವರ ದೇವಸ್ಥಾನವು ಖಜುರಾಹೋದ ಮರಳುಗಲ್ಲಿನ ದೇವಾಲಯಗಳಲ್ಲಿ ಸರಳವಾಗಿ ಕಾಣುತ್ತದೆ. ಇಲ್ಲಿ ಶಿವರಾತ್ರಿಯ ಹಬ್ಬದ ಸಮಯದಲ್ಲಿ ಮೂರು ದಿನಗಳ ಆಚರಣೆ ಇರುತ್ತದೆ. ಜೊತೆಗೆ ಶಿವರಾತ್ರಿಯಂದು ಶಿವನಿಗೆ ಮದುವೆ ಮಾಡಿಸುವ ಅಪರೂಪದ ಆಚರಣೆಯೂ ಇಲ್ಲಿ ನಡೆಯುತ್ತದೆ. ಶಿವಲಿಂಗಕ್ಕೆ ಅಭ್ಯಂಜನ ಮಾಡಿಸಿ ವಸ್ತ್ರವಿನ್ಯಾಸದಿಂದ ಅಲಂಕರಿಸಿ ವರನಂತೆ ಸಿಂಗಾರಗೊಳಿಸುವುದು ಕೂಡಾ ಇಲ್ಲಿನ ವಿಶಿಷ್ಟ ಆಚರಣೆಗಳಲ್ಲೊಂದಾಗಿದೆ. ಜೊತೆಗೆ ಶ್ರಾವಣ ಮಾಸದಲ್ಲೂ ಇಲ್ಲಿ ಉತ್ಸವವನ್ನ ಆಚರಿಸಲಾಗುತ್ತದೆ. ಶ್ರಾವಣ ಮಾಸದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ಬಂದು ಬೇಡಿಕೆಯನ್ನ ಹೇಳಿಕೊಂಡ್ರೆ ಪರಶಿವ ಈಡೇರಿಸುತ್ತಾನೆ ಅನ್ನೋ ನಂಬಿಕೆಯೂ ಇದೆ.

ಅದೇನೇ ಇರಲಿ, ಈ ಶಿವಲಿಂಗ ವರ್ಷದಿಂದ ವರ್ಷಕ್ಕೆ ಬೆಳೆಯೋ ಮೂಲಕ ಜೀವಂತ ಶಿವಲಿಂಗ ಎಂದೇ ಪ್ರಸಿದ್ಧಿಯಾಗಿದೆ. ಈ ವಿಸ್ಮಯದ ಶಿವಲಿಂಗ ನೋಡಲು ಪ್ರವಾಸಿಗರ ದಂಡೇ ಮಾತಂಗೇಶ್ವರ ದೇವಸ್ಥಾನಕ್ಕೆ ದಿನೇ ದಿನೇ ಹರಿದುಬರುತ್ತಿದೆ. ಈ ಶಿವಲಿಂಗ ಒಂದಲ್ಲ ಒಂದು ದಿನ ದೊಡ್ಡ ಪವಾಡವನ್ನೇ ಸೃಷ್ಟಿಸುತ್ತೆ ಅಂತಾ ಕಾಯೋ ಭಕ್ತರೂ ಇಲ್ಲಿದ್ದಾರೆ. ಈ ಶಿವಲಿಂಗ ನಿಜಕ್ಕೂ ಪಾತಾಳ ಮುಟ್ಟುತ್ತಾ.. ಈ ಭೂಮಿಯ ಅಂತ್ಯವನ್ನ ಇದೇ ಶಿವಲಿಂಗ ತಿಳಿಸುತ್ತಾ ಅನ್ನೋದು ಅವರವರ ನಂಬಿಕೆಗೆ ಬಿಟ್ಟಿದ್ದು.

 

Sulekha