ಬಿಎಸ್ ವೈ ಮನೆಗೆ ಕಲ್ಲೇಟು.. ಪೊಲೀಸರಿಂದ ಲಾಠಿ ಚಾರ್ಜ್ – ಒಳಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಕೊತಕೊತ!

ಬಿಎಸ್ ವೈ ಮನೆಗೆ ಕಲ್ಲೇಟು.. ಪೊಲೀಸರಿಂದ ಲಾಠಿ ಚಾರ್ಜ್ – ಒಳಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಕೊತಕೊತ!

ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ರಾಜ್ಯ ಸರ್ಕಾರ ಮೀಸಲಾತಿ ಗಿಫ್ಟ್ ನೀಡಿ ಮತಬುಟ್ಟಿಗೆ ಗಾಳ ಹಾಕುವ ಐಡಿಯಾ ಮಾಡಿತ್ತು. ಅದ್ರಂತೆ ಮಾರ್ಚ್ 24ರಂದು ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿ ನಡೆಸಿ ಒಕ್ಕಲಿಗರು, ಪಂಚಮಸಾಲಿ ಲಿಂಗಾಯತರು ಹಾಗೂ ಎಸ್​ಸಿ ಸಮುದಾಯಗಳಿಗೆ ಒಳ ಮೀಸಲಾತಿ ಘೋಷಣೆ ಮಾಡಿದ್ರು. ಆದ್ರೆ ಇದೇ ಮೀಸಲಾತಿ ಈಗ ಮಲೆನಾಡಿನಲ್ಲಿ ಕಿಚ್ಚು ಹಚ್ಚಿದೆ. ಒಳಮೀಸಲಾತಿ ವಿರುದ್ಧ ಬಂಜಾರ, ಭೋವಿ ಮತ್ತು ಇತರೆ ಸಮಾಜದವರು ಕೆರಳಿ ಕೆಂಡವಾಗಿದ್ದು, ಶಿವಮೊಗ್ಗದ ಶಿಕಾರಿಪುರ ಕೊತಕೊತ ಕುದಿಯುವಂತಾಗಿದೆ.

ಇದನ್ನೂ ಓದಿ : ಸಂಸದ ಸ್ಥಾನದಿಂದ ರಾಹುಲ್ ಅನರ್ಹ – ಕಲಾಪಕ್ಕೆ ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು

ಒಳ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದನ್ನ ವಿರೋಧಿಸಿ ಶಿಕಾರಿಪುರದಲ್ಲಿ ಬಂಜಾರ ಸಮಾಜದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರ ಮೈತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಆದ್ರೆ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇದ್ರಿಂದ ಕೆರಳಿದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಬಿಎಸ್​ವೈ ಮನೆಯ ಕಿಟಕಿ ಗಾಜು ಒಡೆದು ಹಾಕಿದ್ದಾರೆ. ಹಾಗೇ ಮನೆ ಮೇಲಿದ್ದ ಬಿಜೆಪಿ ಧ್ವಜವನ್ನ ಕಿತ್ತೆಸೆದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟ ನೂಕಾಟ ಉಂಟಾಗಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಚಪ್ಪಲಿ ಹಾಗೂ ಕಲ್ಲು ತೂರಿದ್ದಾರೆ. ಬ್ಯಾರಿಕೇಡ್​ಗಳನ್ನ ಕಿತ್ತಿಸೆದು ಪೊಲೀಸರತ್ತ ನುಗ್ಗಿದ್ದಾರೆ. ನೋಡನೋಡುತ್ತಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದ್ರಿಂದ ಕೆಲ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೊನೆಗೆ ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಿಕಾರಿಪುರ ತಹಶೀಲ್ದಾರ್​ ವಿಶ್ವನಾಥ್ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.

ಅಷ್ಟಕ್ಕೂ ಇಲ್ಲಿ ಪ್ರತಿಭಟನಾಕಾರರ ಸಿಟ್ಟಿಗೆ ಕಾರಣ ಒಳಮೀಸಲಾತಿ. ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪರಿಶಿಷ್ಟ ಜಾತಿಗೆ ಶೇ. 15 ರಿಂದ ಶೇ. 17 ಕ್ಕೆ ಮೀಸಲಾತಿ ಹೆಚ್ಚಿಸಿದ ನಂತರ ಸಿಎಂ ಬೊಮ್ಮಾಯಿ, ಎಸ್‌ಸಿ ಎಡ ಪ್ರವರ್ಗಕ್ಕೆ ಶೇ 6, ಎಸ್‌ಸಿ ಬಲ ಪಂಗಡಕ್ಕೆ ಶೇ.5.5, ಅಸ್ಪೃಶ್ಯರಿಗೆ ಶೇ 4.5 ಮತ್ತು ಇತರರಿಗೆ ಶೇ. 1ರಷ್ಟು ಮೀಸಲಾತಿ ಘೋಷಿಸಿದ್ದರು. ಈ ಪ್ರಸ್ತಾವನೆಯನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸುವಂತೆ ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದ್ರೆ ಈ ವರದಿ ಜಾರಿಯಿಂದ ಬಂಜಾರ ಸಮುದಾಯ ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ಕಡಿಮೆ ಮೀಸಲಾತಿ ನೀಡಲಾಗುತ್ತೆ ಅನ್ನೋದು ಪ್ರತಿಭಟನಾಕಾರರ ವಾದ.

suddiyaana