ಮಂಗಳನ ಅಂಗಳದಲ್ಲಿ ಸುಳಿಗಾಳಿ – ಗಾಳಿಯ ಶಬ್ದ ಹೇಗಿದೆ ಗೊತ್ತಾ?

ಮಂಗಳನ ಅಂಗಳದಲ್ಲಿ ಸುಳಿಗಾಳಿ – ಗಾಳಿಯ ಶಬ್ದ ಹೇಗಿದೆ ಗೊತ್ತಾ?

ವಾಷಿಂಗ್ಟನ್‌: ಭೂಮಿಯ ಮೇಲೆ ಗಾಳಿ ಬೀಸಿದಾಗ ನಮಗೆ ತಣ್ಣನೆಯ ಅನುಭವವಾಗುತ್ತದೆ. ಗಾಳಿ ಬೀಸುವಾಗ ಅದರ ಶಬ್ದವನ್ನು ನಾವು ಆಲಿಸಿರುತ್ತೇವೆ. ಇದೀಗ ನಾಸಾ ವಿಜ್ಞಾನಿಗಳು ಮೊದಲ ಬಾರಿಗೆ ಮಂಗಳ ಗ್ರಹದಲ್ಲಿನ ಸುಳಿಗಾಳಿಯ ಶಬ್ದದ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಮಂಗಳನ ಅಂಗಳದಲ್ಲಿ ನಾಸಾದ ರೋವರ್ ಅಲೆದಾಡುತ್ತಿದೆ. ಈ ರೋವರ್ ಶಬ್ದ ಆಲಿಸುವ ಕೆಲಸವನ್ನು ಮಾಡಿದೆ. ಮಂಗಳನಲ್ಲಿ ಕೆಂಪು ಧೂಳಿನ ಸುಳಿ ಗಾಳಿಯು (ಡಸ್ಟ್‌ ಡೆವಿಲ್‌) ರೋವರ್‌ನ ಮೇಲ್ಭಾಗದಿಂದ ಹಾದು ಹೋಗುತ್ತಲೇ, ಅದರ ಶಬ್ದವನ್ನು ರೋವರ್‌ ತನ್ನ ಮೈಕ್ರೋಫೋನ್‌ ಮೂಲಕ ಸೆರೆಹಿಡಿದಿದೆ. ಗಂಟೆಗೆ 25 ಮೈಲುಗಳ ವೇಗದಲ್ಲಿ ಸುಳಿಗಾಳಿ ಬೀಸಿದೆ. ಸುಳಿಗಾಳಿಯ ಶಬ್ದ ಸುಮಾರು 10 ಸೆಕೆಂಡುಗಳ ಕಾಲ ರೋವರ್​ನಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನೀವು ಜಾಸ್ತಿ ಹೆಡ್‌ಫೋನ್‌ ಬಳಕೆ ಮಾಡ್ತೀರಾ? ಹಾಗಾದ್ರೆ ನಿಮ್ಮ ಕಿವಿ ಜಾಗ್ರತೆ

ಮಂಗಳಗ್ರಹದ ಸುಳಿಗಾಳಿಯ ಶಬ್ದಕ್ಕೂ, ಭೂಮಿಯಲ್ಲಿನ ಗಾಳಿಯ ಶಬ್ದಕ್ಕೂ ದೊಡ್ಡಮಟ್ಟದ ವ್ಯತ್ಯಾಸವೇನೂ ಕಂಡುಬಂದಿಲ್ಲ. ಆದರೆ, ಮಂಗಳ ಗ್ರಹದಲ್ಲಿ ಗಾಳಿಯ ಒತ್ತಡ ಹೆಚ್ಚು ಬಲಯುತವಾಗಿಲ್ಲದ ಕಾರಣ, ಗಾಳಿಯ ಶಬ್ದವು ಭೂಮಿಗಿಂತ ಕ್ಷೀಣವಾಗಿದೆ. ಮಂಗಳನ ನೆಲದಲ್ಲಿ ಸುಳಿಗಾಳಿಯು ಸಾಮಾನ್ಯ ವಿದ್ಯಮಾನವಾಗಿದೆ. ಆದರೆ, ಅದು ಆಡಿಯೋದಲ್ಲಿ ಸೆರೆಯಾಗಿದ್ದು ಇದೇ ಮೊದಲು. ಸೆಕೆಂಡಿಗೆ ಸುಮಾರು 5 ಮೀಟರ್‌ ವೇಗದಲ್ಲಿ ಈ ಧೂಳು ಗಾಳಿ ಸಂಚರಿಸಿದೆ ಎಂದು ನಾಸಾ ಹೇಳಿದೆ.

ಪರ್ಸೆವೆರೆನ್ಸ್‌ ರೋವರ್‌ನಲ್ಲಿ ಅಳವಡಿಸಲಾಗಿರುವ ಮೈಕ್ರೋಫೋನ್‌ ಸದಾ ಕಾಲ ಆನ್‌ ಆಗಿರುವುದಿಲ್ಲ. ಕೆಲವು ದಿನಗಳಿಗೊಮ್ಮೆ 3 ನಿಮಿಷಕ್ಕೂ ಕಡಿಮೆ ಅವಧಿಗೆ ಇದನ್ನು ಆನ್‌ ಮಾಡಲಾಗುತ್ತದೆ. 2021ರ ಸೆ.27ರಂದು ಮೈಕ್ರೋಫೋನ್‌ ಆನ್‌ ಆಗಿದ್ದರಿಂದ, ಅದೃಷ್ಟವೆಂಬಂತೆ ಸುಳಿಗಾಳಿಯ ಶಬ್ದವು ಸೆರೆಯಾಗಲು ಸಾಧ್ಯವಾಯಿತು ಎನ್ನುತ್ತಾರೆ ವಿಜ್ಞಾನಿಗಳು.

suddiyaana