ಭದ್ರತಾ ಲೋಪದ ಬಗ್ಗೆ ವಿಪಕ್ಷಗಳಿಗೆ ಉತ್ತರಿಸಲಾಗದೆ ಸಂಸದರನ್ನು ಅಮಾನತು ಮಾಡಿದ್ರಾ – ಕಲಾಪ ಬಲಿ ಆಗಿದ್ದಕ್ಕೆ ಹೊಣೆ ಯಾರು?

ಭದ್ರತಾ ಲೋಪದ ಬಗ್ಗೆ ವಿಪಕ್ಷಗಳಿಗೆ ಉತ್ತರಿಸಲಾಗದೆ ಸಂಸದರನ್ನು ಅಮಾನತು ಮಾಡಿದ್ರಾ – ಕಲಾಪ ಬಲಿ ಆಗಿದ್ದಕ್ಕೆ ಹೊಣೆ ಯಾರು?

ಪ್ರಜಾಪ್ರಭುತ್ವದ ದೇಗುಲ, ಸಾರ್ವಭೌಮತೆಯ ಪ್ರತೀಕ ಅಂತೆಲ್ಲಾ ಕರೆಸಿಕೊಳ್ಳುವ ಸಂಸತ್ತು ಕಂಡು ಕೇಳರಿಯದ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ. ಕಲರ್ ಗ್ಯಾಸ್ ಹಿಡಿದು ಕಲಾಪದಲ್ಲಿ ಇಬ್ಬರು ಕೋಲಾಹಲ ಸೃಷ್ಟಿಸಿದ್ದರು. ಇದೇ ವಿಚಾರವಾಗಿ ಲೋಕಸಭೆ ಮತ್ತು ರಾಜ್ಯಸಭೆ ರಣಾಂಗಣವಾಗಿದೆ. ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸದಸ್ಯರ ಸಿಟ್ಟಿಗೆ ಸಂಸತ್ತಿನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಬೇಕೆಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದಾರೆ. ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಮೇಲ್ಮನೆ ಮತ್ತು ಕೆಳಮನೆಯಲ್ಲಿ ದಾಖಲೆ ಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಲಾಗಿದೆ. ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಸದನಕ್ಕೆ ಕಾಲಿಡದಂತೆ ಸಸ್ಪೆಂಡ್ ಮಾಡಲಾಗಿದೆ. ಸ್ಪೀಕರ್ ಅವರ ಈ ವರ್ತನೆಗೆ ವಿಪಕ್ಷ ಸದಸ್ಯರು ಕೆರಳಿ ಕೆಂಡವಾಗಿದ್ದಾರೆ.

ಇದನ್ನೂ ಓದಿ : ಡೊನಾಲ್ಡ್‌ ಟ್ರಂಪ್‌ ಗೆ ದೊಡ್ಡ ಶಾಕ್‌! – ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹಗೊಳಿಸಿದ ಕೋರ್ಟ್‌!

ಡಿಸೆಂಬರ್ 13ರಂದು ಲೋಕಸಭೆ ಕಲಾಪದ ವೇಳೆ ಇಬ್ಬರು ಗ್ಯಾಸ್ ಸ್ಮೋಕರ್ಸ್ ಹಿಡಿದು ಅಟ್ಯಾಕ್ ಮಾಡಿದ್ದರು. ಡಿಸೆಂಬರ್ 14 ಮತ್ತು 15ರಂದು ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ವಿಪಕ್ಷಗಳ ಸದಸ್ಯರು ಭದ್ರತಾ ಉಲ್ಲಂಘನೆ ಬಗ್ಗೆ ಗೃಹ ಸಚಿವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ವಾಗ್ವಾದ ತಾರಕಕ್ಕೇರಿದ್ದು ಅಶಿಸ್ತಿನ ವರ್ತನೆ ಆಧಾರದ ಮೇಲೆ 13 ಸದಸ್ಯರನ್ನು ಅಮಾನತು ಮಾಡಿ ಉಭಯ ಸದನಗಳ ಸ್ಪೀಕರ್ ಗಳು ಆದೇಶ ಹೊರಡಿಸಿದ್ದರು. ಬಳಿಕ ಡಿಸೆಂಬರ್ 18ರಂದು ಮತ್ತೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಇದೇ ವಿಚಾರವಾಗಿ ಕೋಲಾಹಲ ಉಂಟಾಗಿತ್ತು. ಪ್ರತಿಪಕ್ಷಗಳ ಸಂಸದರ ಪ್ರತಿಭಟನೆಯಿಂದ ಉಭಯ ಸದನಗಳಲ್ಲಿ ಗದ್ಧಲ ಉಂಟಾಗಿತ್ತು. ಈ ವೇಳೆ ದಾಖಲೆಯ ಮಟ್ಟದಲ್ಲಿ ಒಂದೇ ದಿನ 79ಸಂಸದರನ್ನು ಅಮಾನತು ಮಾಡಲಾಗಿತ್ತು. ಇನ್ನು ಡಿಸೆಂಬರ್ 19ರಂದು ಮತ್ತೆ ವಿಪಕ್ಷ ನಾಯಕರು ಅಮಿತ್ ಶಾ ಹೇಳಿಕೆಗೆ ಪಟ್ಟು ಹಿಡಿದಿದ್ದು ಲೋಕಸಭೆಯ 49 ಸಂಸದರನ್ನು ಇಡೀ ಅಧಿವೇಶನದಿಂದ ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದರು. ಹೀಗೆ ಸಸ್ಪೆಂಡ್ ಆಗಿರುವ ಬಹುತೇಕ ಸಂಸದರು ಮೋದಿ ವಿರುದ್ಧ ಒಂದುಗೂಡಿರುವ ಇಂಡಿಯಾ ಮೈತ್ರಿಕೂಟದ ಸದಸ್ಯರೇ ಆಗಿದ್ದಾರೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಮೈತ್ರಿಕೂಟದ ಪಕ್ಷಗಳು 142 ಸಂಸದರನ್ನು ಹೊಂದಿವೆ. ಈ ಪೈಕಿ ಮಂಗಳವಾರದ ಅಂತ್ಯದ ವೇಳೆಗೆ 95 ಸದಸ್ಯರ ಅಮಾನತು ಮಾಡಲಾಗಿದೆ. ಇನ್ನು 250 ಸದಸ್ಯ ಬದಲ ರಾಜ್ಯಸಭೆಯಲ್ಲಿ ವಿಪಕ್ಷಗಳ 101 ಸಂಸದರಿದ್ದಾರೆ. ಈ ಪೈಕಿ 46 ಸಂಸದರನ್ನ ಸಸ್ಪೆಂಡ್  ಮಾಡಲಾಗಿದೆ.

ಲೋಕಸಭೆಯಲ್ಲಿ ಬುಧವಾರ ಕೂಡ ಭದ್ರತಾ ಉಲ್ಲಂಘನೆ ವಿಚಾರವಾಗಿಯೇ ಸಂಸದರ ಅಮಾನತು ಸರಣಿ ಮುಂದುವರಿದಿತ್ತು. ಲೋಕಸಭೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ  ಪ್ರತಿಪಕ್ಷದ ಇಬ್ಬರು ಸಂಸದರನ್ನು ಚಳಿಗಾಲದ ವಿಶೇಷ ಅಧಿವೇಶನದವರೆಗೆ ಅಮಾನತಿನಲ್ಲಿಡಲಾಗಿದೆ. ಕೇರಳದ ಸಂಸದ ಥಾಮಸ್ ಚಳಿಕಂಡನ್ ಹಾಗೂ ಸಿಪಿಐಎಂ ಸಂಸದ ಎ.ಎಂ.ಆರೀಫ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಅಮಾನತು ಪ್ರಸ್ತಾವನೆ ಮಂಡಿಸಿದ್ದು, ಸದನ ಅದನ್ನು ಅಂಗೀಕರಿಸಿದ ಬಳಿಕ ಅಮಾನತು ಮಾಡಲಾಗಿದೆ. ಇದರೊಂದಿಗೆ ಲೋಕಸಭೆಯಿಂದ ಅಮಾನತುಗೊಂಡ ಸಂಸದರ ಸಂಖ್ಯೆ 97ಕ್ಕೆ ಏರಿಕೆಯಾಗಿದೆ. ಮಾಡಲಾಗಿದೆ. ಒಂದೇ ವಾರದಲ್ಲಿ ಉಭಯ ಸದನಗಳಿಂದ 143 ಸಂಸದರನ್ನು ಅಮಾನತು ಮಾಡಿದಂತಾಗಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ನಡೆಯುತ್ತಿರುವ ಕೊನೆಯ ಪೂರ್ಣ ಅಧಿವೇಶನದಲ್ಲಿ ನಡೆದ ಈ ಬೆಳವಣಿಗೆ ಭಾರೀ ಅಚ್ಚರಿಗೆ ಕಾರಣವಾಗಿದೆ.

Shantha Kumari