ಮದುವೆಯಾದ ಎರಡೇ ದಿನಕ್ಕೆ ಸರ್ಕಾರಿ ಕೆಲಸ ಕಳೆದುಕೊಂಡ ವರ – ಕಾರಣವೇನು ಗೊತ್ತಾ?
ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಒಳ್ಳೆಯ ಮನೆತನಕ್ಕೆ ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ವರನಿಗೆ ಒಳ್ಳೆ ಉದ್ಯೋಗ, ಉತ್ತಮ ವೇತನ ಇರಬೇಕೆಂದೂ ಬಯಸುತ್ತಾರೆ. ಇನ್ನೂ ಕೆಲವರು ಸರ್ಕಾರಿ ಕೆಲಸ ಇದ್ರೆ ಲೈಫ್ ಸೆಟಲ್ ಅಗಿರುತ್ತೆ. ಸರ್ಕಾರಿ ಉದ್ಯೋಗ ಹೊಂದಿರುವವರನ್ನೇ ಆಯ್ಕೆ ಮಾಡುತ್ತಾರೆ. ಈ ಕುಟುಂಬದ ಆಸೆಯೂ ಅದೇ ಆಗಿತ್ತು.
ಪಶ್ಚಿಮ ಬಂಗಾಳದ ಕೂಚ್ ವಿಹಾರ್‌ನಲ್ಲಿರುವ ಕುಟುಂಬವೊಂದು ತಮ್ಮ ಮಗಳನ್ನು ಸರ್ಕಾರಿ ಉದ್ಯೋಗಿಗೆ ಮದುವೆ ಮಾಡಿಸಬೇಕು ಅಂತಾ ಆಸೆಪಟ್ಟಿದ್ದರು. ಆಸೆಯಂತೆ ಮಗಳ ಮದುವೆಯನ್ನು ಸರ್ಕಾರಿ ವೇತನ ಪಡೆಯುತ್ತಿರುವ ಶಿಕ್ಷಕನೊಂದಿಗೆ ಏರ್ಪಡಿಸಿದರು. ತನ್ನ ಮಗಳನ್ನು ಸರ್ಕಾರಿ ನೌಕರನಿಗೆ ಮದುವೆ ಮಾಡಿ ಕೊಡುತ್ತೇವೆ ಎಂದುಕೊಂಡು ಹುಡುಗಿಯ ಮನೆಯಲ್ಲಿ ಎಲ್ಲರೂ ಸಂತೋಷಪಟ್ಟಿದ್ದರು. ಆದರೆ ಮದುವೆಯಾದ ಎರಡೇ ದಿನಕ್ಕೆ ಆ ಖುಷಿ ಕಮರಿ ಹೋಗಿದೆ.
ಇದನ್ನೂ ಓದಿ: ವಧುವಿಗೆ 12ನೇ ತರಗತಿಯಲ್ಲಿ ಕಡಿಮೆ ಮಾರ್ಕ್ಸ್ – ತಾಳಿ ಕಟ್ಟಲ್ಲ ಅಂದ ವರನಿಂದಾಗಿ ಮದುವೆ ಕ್ಯಾನ್ಸಲ್
ಹೌದು, ಪಶ್ಚಿಮ ಬಂಗಾಳದ ವರ ಪ್ರಣವ್ ರಾಯ್ 2017 ರಿಂದ ಜಲ್ಪೈಗುರಿಯ ರಾಜದಂಗ ಕೆಂಡಾ ಮೊಹಮ್ಮದ್ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ವರ ಸರ್ಕಾರಿ ಉದ್ಯೋಗಿ ಅನ್ನೊ ಸುದ್ದಿ ತಿಳಿದ ಹುಡುಗಿಯ ಮನೆಯವರು ಮದುವೆ ಮಾಡಲು ನಿರ್ಧರಿಸಿದ್ದಾರೆ. ಕಳೆದ ಗುರುವಾರ ಅದ್ಧೂರಿಯಾಗಿ ವಿವಾಹ ನೆರವೇರಿದೆ. ನಂತರ ಪ್ರಣವ್ ಶುಕ್ರವಾರ ಪತ್ನಿಯೊಂದಿಗೆ ತನ್ನ ಮನೆಗೆ ಮರಳಿದ್ದರು. ಆದರೆ ಅದೇ ದಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿ 842 ಶಿಕ್ಷಕರ ನೇಮಕಾತಿ ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಪಟ್ಟಿಯನ್ನು ಸಾರ್ವಜನಿಕಗೊಳಿಸಿದಾಗ ಅದರಲ್ಲಿ ಪ್ರಣವ್ ರಾಯ್ ಹೆಸರೂ ಇತ್ತು. ಕೆಲಸ ಕಳೆದುಕೊಂಡ ಸುದ್ದಿ ತಿಳಿದ ತಕ್ಷಣ ಮನೆಯಲ್ಲಿ ಬೇಸರ ಮಡುಗಟ್ಟಿದೆ.
ಅಷ್ಟರಲ್ಲಾಗಲೇ ಪ್ರಣವ್ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೆಲವರು ವರನ ದೌರ್ಭಾಗ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಗುರುವಾರ ಮದುವೆಯಾದರು ಶುಕ್ರವಾರ ಕೆಲಸ ಹೋಯಿತು ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಇದ್ಯಾವುದಕ್ಕೂ ದಂಪತಿ ಅಥವಾ ಅವರ ಕುಟುಂಬದವರು ಪ್ರತಿಕ್ರಿಯಿಸಿಲ್ಲ ಎಂದು ವರದಿಯಾಗಿದೆ.