ಚಿಕ್ಕಬಳ್ಳಾಪುರದಲ್ಲಿ ಮಳೆಯಿಲ್ಲದೇ ಕಂಗಾಲಾದ ಜನ – ಮಳೆಗಾಗಿ ಮಾಡಿಸಿದರು ಮಕ್ಕಳ ಮದುವೆ

ಚಿಕ್ಕಬಳ್ಳಾಪುರದಲ್ಲಿ ಮಳೆಯಿಲ್ಲದೇ ಕಂಗಾಲಾದ ಜನ – ಮಳೆಗಾಗಿ ಮಾಡಿಸಿದರು ಮಕ್ಕಳ ಮದುವೆ

ಚಿಕ್ಕಬಳ್ಳಾಪುರದಲ್ಲಿ ರೈತರು ಕಂಗಾಲಾಗಿ ಹೋಗಿದ್ದಾರೆ. ಮಳೆಯಿಲ್ಲದೇ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ.  ಜೊತೆಗೆ ಜನ ಕೂಡಾ ಮಳೆಯಿಲ್ಲದೇ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಗಳಕೊಪ್ಪೆ ಗ್ರಾಮಸ್ಥರು ಹಳೇ ಸಂಪ್ರದಾಯದ ಮೊರೆ ಹೋಗಿದ್ದಾರೆ. ಮಳೆಗಾಗಿ ಮಕ್ಕಳ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ:  ವರುಣನ ಅಬ್ಬರಕ್ಕೆ ಕುಸಿದೇ ಹೋಯ್ತು ದೇವಾಲಯದ ಒಂದು ಭಾಗ – ಮತ್ತೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ನೀರಿಕ್ಷಿಸಿದಷ್ಟು ಮಳೆ ಬಂದಿಲ್ಲ. ಮಳೆಯಿಲ್ಲದೇ ರಾಗಿ, ಮೆಕ್ಕೆಜೋಳ, ಅವರೆ, ತೊಗರಿ ಸೇರಿದಂತೆ ಮಳೆಯಾಶ್ರಿತ ಬೆಳೆಗಳೆಲ್ಲವೂ ಒಣಗಿ ಬಾಡಿ ಹೋಗುತ್ತಿವೆ. ಮಳೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಗಳಕೊಪ್ಪೆ ಗ್ರಾಮದಲ್ಲಿ ಮಕ್ಕಳ ಅಣಕು ಮದುವೆ ಮಾಡಿಸಲಾಗಿದೆ. ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ಹುಡುಗನಿಗೆ ವಧು ವೇಷ ಹಾಕಿ ಮತ್ತೋರ್ವ ಹುಡುಗನಿಗೆ ವರನ ಪೋಷಾಕು ಹಾಕಿ ಶಾಸ್ತ್ರೋಕ್ತವಾಗಿ ಅರ್ಚಕರ ನೇತೃತ್ವದಲ್ಲಿ ಅಣಕು ಮದುವೆ ಮಾಡುವ ಮೂಲಕ ಮಳೆಗಾಗಿ ಗ್ರಾಮಸ್ಥರು ಮೊರೆಯಿಟ್ಟಿದ್ದಾರೆ. ಗ್ರಾಮದ ಮಧ್ಯಭಾಗದ ಬೀದಿಯಲ್ಲಿ ಮಹಿಳೆಯರೆಲ್ಲ ಕೂತು ಸೋಬಾನೆ ಗೀತೆ ಹಾಡಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕ ಬಾಲಕರು ಥೇಟ್ ವರ-ವಧುವಿನಂತೆ ಕಂಗೊಳಿಸಿದ್ದಾರೆ. ವರನ ಪೋಷಾಕುನಲ್ಲಿದ್ದ ಬಾಲಕ ವಧು ವೇಷದಲ್ಲಿದ್ದ ಮತ್ತೋರ್ವ ಬಾಲಕನಿಗೆ ಅರಿಶಿನ ಕೊಂಬು (ತಾಳಿ) ಕಟ್ಟುವ ಮೂಲಕ ಮದುವೆ ಮಾಡಲಾಗಿದೆ. ಈ ರೀತಿ ಮಕ್ಕಳಿಗೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಜನರದ್ದು. ಹೀಗಾಗಿ ಮಕ್ಕಳ ಮದುವೆ ಮಾಡಿಸಲಾಗಿದೆ.

suddiyaana