ವರನ ಗೆಳೆಯರಿಗೆ ಮಾಂಸದೂಟ ಬಡಿಸದ್ದಕ್ಕೆ ಮದುವೆಯೇ ರದ್ದು

ವರನ ಗೆಳೆಯರಿಗೆ ಮಾಂಸದೂಟ ಬಡಿಸದ್ದಕ್ಕೆ ಮದುವೆಯೇ ರದ್ದು

ಕೇಳಿದಷ್ಟು ವರದಕ್ಷಿಣೆ ಕೊಡಲು ಒಪ್ಪದಿದ್ದಾಗ, ಎರಡು ಕುಟುಂಬಗಳ ನಡುವೆ ಮನಸ್ತಾಪ ಉಂಟಾದಾಗ ಮದುವೆ ರದ್ದಾಗುವುದನ್ನು ನಾವು ಕೆಳಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ವರನ ಗೆಳೆಯರಿಗೆ ಚಿಕನ್ ಊಟ ನೀಡಿಲ್ಲ ಎಂದು ವಿವಾಹವೇ ರದ್ದಾಗಿದೆ.

ಹೈದರಾಬಾದ್‌ನ ಶಹಪುರ ನಗರದ ಜಗದ್ಗಿರಿಗುಟ್ಟದ ರಿಂಗ್‌ಬಸ್ತಿಯ ವರ ಮತ್ತು ಕುತ್ಬುಳ್ಳಾಪುರದ ವಧು ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಶಹಪುರ ನಗರದ ಹಾಲ್‌ನಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ನವೆಂಬರ್ 28ರಂದು ಮಧ್ಯಾಹ್ನ 3 ಗಂಟೆಗೆ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ ಮದುವೆಗೂ ಮುನ್ನ ಭಾನುವಾರ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ವಧು-ವರರು ಬಿಹಾರದ ಮಾರ್ವಾಡಿ ಕುಟುಂಬದವರಾಗಿದ್ದರಿಂದ ಈ ಸಂದರ್ಭದಲ್ಲಿ ಸಸ್ಯಾಹಾರಿ ಖಾದ್ಯಗಳನ್ನು ತಯಾರಿಸಿದರು. ಅಲ್ಲದೇ ಈ ಭೋಜನ ಬಹುತೇಕ ಮುಗಿದಿತ್ತು. ಆದರೆ ಕೊನೆಯಲ್ಲಿ ಬಂದ ಮದುಮಗನ ಸ್ನೇಹಿತರು ಔತಣಕೂಟದಲ್ಲಿ ಕೋಳಿ ಯಾಕೆ ಇಲ್ಲ ಎಂದು ತಕರಾರು ತೆಗೆದಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ಡಿಜೆ ನೃತ್ಯ ಹಾಕುವಂತಿಲ್ಲ!

ಈ ವಿಷಯ ತಿಳಿದ ವರನ ಸಂಬಂಧಿಕರು ವಧುವಿನ ಕಡೆಯವರು ತಮಗೆ ಬೇಕಾದಂತೆ ಊಟ ಬಡಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ.

ಅಲ್ಲದೇ ಕೆಲವೇ ಗಂಟೆಗಳಲ್ಲಿ ನಡೆಯಬೇಕಿದ್ದ ಮದುವೆ ಜಗಳದಿಂದ ರದ್ದಾಗಿದೆ. ಕೂಡಲೇ ಮದುಮಗಳ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದಾರೆ. ಬಳಿಕ ಎರಡೂ ಕುಟುಂಬದವರೊಂದಿಗೆ ಮಾತನಾಡಿ ರಾಜಿ ಸಂಧಾನ ಮಾಡಿದ್ದಾರೆ. ಸದ್ಯ ಜಗಳ ಅಂತ್ಯವಾಗಿದ್ದು, ನವೆಂಬರ್ 30ರಂದು ಮದುವೆ ನಡೆಸಲು ವಧು-ವರರ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

suddiyaana