ಯುವತಿಯರ ಮದುವೆ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಕೆಯಾಗುತ್ತಾ? ಸುಪ್ರೀಂ ಕೋರ್ಟ್ ಹೇಳಿದ್ದೇನು?
ನವದೆಹಲಿ: ದೇಶದಲ್ಲಿ ಹೆಣ್ಣಿನ ಮದುವೆ ವಯಸ್ಸನ್ನು 18 ರಿಂದ 21ಕ್ಕೆ ಏರಿಕೆ ಮಾಡಬೇಕು ಅನ್ನೋ ಕೂಗು ಒಂದಡೆಯಾದರೆ, ಗಂಡು ಹೆಣ್ಣಿಗೆ ಮದುವೆಗೆ ಸಮಾನ ವಯಸ್ಸು ನಿಗದಿ ಮಾಡಬೇಕು ಅಂತಾ ಹಲವು ವರ್ಷಗಳಿಂದ ಬೇಡಿಕೆ ಇದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಗಂಡು ಮತ್ತು ಹೆಣ್ಣಿನ ಮದುವೆ ವಯಸ್ಸು ನಿರ್ಧರಿಸೋದು, ಏರಿಕೆ ಮಾಡೋದು ಎಲ್ಲವೂ ಶಾಸಕಾಂಗದ ಅಧಿಕಾರ. ಇದನ್ನು ಸಂಸತ್ತು ನಿರ್ಧರಿಸಲಿದೆ. ಇದರ ಮಧ್ಯೆ ಸುಪ್ರೀಂ ಕೋರ್ಟ್ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಗಂಡು ಹೆಣ್ಣಿನ ಮದುವೆ ವಯಸ್ಸಿನ ಬದಲಾವಣೆ ಅರ್ಜಿಯನ್ನು ವಿಚಾರಣೆ ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಶಾಹೀದಾ ಖುರೇಶಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗುವುದು ಅಂತಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರನ್ನೊಳಗೊಂಡ ಪೀಠ ಹೇಳಿದೆ.
ಇದನ್ನೂ ಓದಿ: ಮೋದಿ ವಿರುದ್ಧ ಗುಡುಗಿದ್ದ ಕೋಲಾರದಲ್ಲೇ ಮತ್ತೆ ರಾಹುಲ್ ಭಾಷಣಕ್ಕೆ ‘ಕೈ’ ಪ್ಲ್ಯಾನ್ – ‘ಅನರ್ಹ’ವೇ ಅಸ್ತ್ರವಾಗುತ್ತಾ..?
ಶಾಹೀದಾ ಖುರೇಷಿ ಅವರು ಹೆಣ್ಣಿನ ಮದುವೆ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಬೇಕು ಅಂತಾ ಮನವಿ ಮಾಡಿದ್ದರು. ಇದೇ ವೇಳೆ ಸುಪ್ರೀಂ ಕೋರ್ಟ್ ಪೀಠ, ಅಡ್ವೋಕೇಟ್ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮದುವೆಗೆ ಸಮಾನ ವಯಸ್ಸು ನಿಗದಿಪಡಿಸಬೇಕೆಂಬ ಅರ್ಜಿಯನ್ನು ಉಲ್ಲೇಖಿಸಿದೆ. ಫೆಬ್ರವರಿ 20 ರಂದು ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು.
ಗಂಡು ಹೆಣ್ಣು ಮದುವೆ ವಯಸ್ಸಿನ ವಿಚಾರ ಶಾಸಕಾಂಗದ ಕಾರ್ಯವ್ಯಾಪ್ತಿಯಲ್ಲಿದೆ. ಒಂದು ವೇಳೆ ಈಗಿರುವ ಉಪಬಂಧವನ್ನು ತೆಗೆದು ಹಾಕಿದರೆ ಯುವತಿಯರಿಗೆ ಕನಿಷ್ಠ ಮದುವೆ ನಿಗದಿಯೇ ಇಲ್ಲದಂತಾಗುತ್ತದೆ. ಇದು ಮದುವೆಗೆ ಸಂಬಂಧಿಸಿದ ಖಾಸಗಿ ಕಾನೂನಿಗೆ ಸಂಬಂಧಿಸಿದೆ ಎಂದು ಪೀಠ ಹೇಳಿದೆ. ಶಾಸಕಾಂಗ ವಿಚಾರದಲ್ಲಿ ಕೋರ್ಟ್ ತಲೆಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಗಂಡು ಹೆಣ್ಣಿನ ಮದುವೆ ವಯಸ್ಸಿನ ಕುರಿತು ಜಸ್ಟೀಸ್ ತುಷಾರ್ ಮೆಹ್ತಾ ಅವರಿದ್ದ ಪೀಠ ಈಗಾಗಲೇ ಆದೇಶ ನೀಡಿದೆ. ಹೀಗಾಗಿ ಮತ್ತೆ ಈ ಕುರಿತು ಅರ್ಜಿಯನ್ನು ಸ್ವೀಕರಿಸಿವುದು ಯೋಗ್ಯವಲ್ಲ. ವಯಸ್ಸಿನ ಅಂತರ, ಹಾಗೂ ವಯಸ್ಸು ಏರಿಕೆ ಕಾನೂನು ರೂಪಿಸುವ ಅಧಿಕಾರವನ್ನು ಶಾಸಕಾಂಗದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಎಲ್ಲರಿಗೂ ನ್ಯಾಯ ನೀಡುವುದು ನಮ್ಮ ಉದ್ದೇಶ, ಕಾನೂನು ರೂಪಿಸುವುದಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.