ಗುಂಡೇಟು ಬಿದ್ದರೂ ಗೆದ್ದು ಬಂದಿದ್ದ ಬಲರಾಮ – ನಾಡದೇವಿ ಪುತ್ರನ ಅಗಲಿಕೆಗೆ ಮೋದಿ ಸೇರಿ ಹಲವರ ಸಂತಾಪ

ಗುಂಡೇಟು ಬಿದ್ದರೂ ಗೆದ್ದು ಬಂದಿದ್ದ ಬಲರಾಮ – ನಾಡದೇವಿ ಪುತ್ರನ ಅಗಲಿಕೆಗೆ ಮೋದಿ ಸೇರಿ ಹಲವರ ಸಂತಾಪ

ಸೌಮ್ಯ ಸ್ವಭಾವ. ರಾಜ ಗಾಂಭೀರ್ಯ. ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿಯನ್ನ ಹೊತ್ತು ಅರಮನೆನಗರಿಯಲ್ಲಿ ಬಲರಾಮ ಹೆಜ್ಜೆ ಇಟ್ರೆ ಕೋಟ್ಯಂತರ ಜನ ಕಣ್ಣರಳಿ ನೋಡ್ತಿದ್ರು. ಗತವೈಭವ ಕಂಡು ಪುಳಕಗೊಳ್ತಿದ್ರು. ವಿಶ್ವವಿಶ್ವಾತ ಮೈಸೂರು ದಸರಾದಲ್ಲಿ ಬರೋಬ್ಬರಿ 14 ಬಾರಿ ಚಿನ್ನದಂಬಾರಿ ಹೊತ್ತು ನಾಡಹಬ್ಬವನ್ನ ಯಶಸ್ವಿಗೊಳಿಸಿದ್ದ ಬಲರಾಮ ಆನೆ ಇನ್ನೇನಿದ್ರೂ ನೆನಪು ಮಾತ್ರ. ಬಲರಾಮನ ನಿಧನಕ್ಕೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ದಸರಾ ಗಜಪಡೆಯ ಮಾಜಿ ಕ್ಯಾಪ್ಟನ್ 67 ವರ್ಷದ ಬಲರಾಮ ಆನೆ ವಿಧಿವಶವಾಗಿದೆ. ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿದ್ದ ಬಲರಾಮ ಆನೆಯ ಬಾಯಿಯಲ್ಲಿ ಹುಣ್ಣಾಗಿತ್ತು. ಇದರಿಂದ ಬಲರಾಮ ಹಲವು ದಿನಗಳಿಂದ ಆಹಾರ, ನೀರು ಸೇವಿಸಲು ಆಗದೆ ನಿತ್ರಾಣಗೊಂಡಿದ್ದ. ಹೀಗಾಗಿ ಶಿಬಿರದಲ್ಲೇ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾನೆ. 20 ವರ್ಷಗಳ ಕಾಲ ದಸರೆಗೆ ಮೆರುಗು ತಂದಿದ್ದ ಬಲರಾಮನ ನಿಧನಕ್ಕೆ ಹಲವರು ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ, ಹಲವು ವರ್ಷಗಳಿಂದ ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಹಾಗೇ ವಿಪಕ್ಷನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ : 14 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಬಲರಾಮ ಇನ್ನಿಲ್ಲ – ಅಚ್ಚು ಮೆಚ್ಚಿನ ಗಜರಾಜನಿಗೆ ಅಂತಿಮ ವಿದಾಯ

ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದ ಬಲರಾಮ 20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ. ಬರೋಬ್ಬರಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ. ಸೌಮ್ಯ ಸ್ವಭಾವದ ಈತ 2.70ಮೀಟರ್ ಎತ್ತರ, 3.77ಮೀ. ಉದ್ದವಿದ್ದ ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು.

ಕಳೆದ ಡಿಸೆಂಬರ್ 22ರಂದು ಬಲರಾಮ ಆನೆಗೆ ಗುಂಡು ಹೊಡೆಯಲಾಗಿತ್ತು. ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪದ ಜಮೀನೊಂದಕ್ಕೆ ಬಲರಾಮ ಹೋಗಿದ್ದ. ಇದರಿಂದ ಕೋಪೋದ್ರಿಕ್ತನಾದ ಆ ಜಮೀನಿನ ಮಾಲೀಕ ಸುರೇಶ್ ಎಂಬಾತ ಮನಸೋ ಇಚ್ಛೆ ಬಲರಾಮನಿಗೆ ಗುಂಡು ಹಾರಿಸಿದ್ದ. ಈ ವೇಳೆ ಗುಂಡು ಆನೆಯ ತೊಡೆ, ಕಾಲು ಸೇರಿದಂತೆ ದೇಹದ ಅರ್ಧ ಭಾಗಕ್ಕೆ ಹೊಕ್ಕಿ ಬಲರಾಮನಿಗೆ ತೀವ್ರ ಘಾಸಿಗೊಳಿಸಿತ್ತು. ವಿಷಯ ತಿಳಿಯುತ್ತಿದ್ದಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಡಾ. ರಮೇಶ್ ಅವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಆದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಆತನಿಂದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

suddiyaana