ನಾಯಕರ ನಡುವೆ ಸಮರ.. ವಿಪಕ್ಷನಾಯಕ, ರಾಜ್ಯಾಧ್ಯಕ್ಷ ನೇಮಕ ಗೊಂದಲ – ರಾಜ್ಯ ಬಿಜೆಪಿಗೆ ಸಾಲು ಸಾಲು ಸವಾಲು

ನಾಯಕರ ನಡುವೆ ಸಮರ.. ವಿಪಕ್ಷನಾಯಕ, ರಾಜ್ಯಾಧ್ಯಕ್ಷ ನೇಮಕ ಗೊಂದಲ – ರಾಜ್ಯ ಬಿಜೆಪಿಗೆ ಸಾಲು ಸಾಲು ಸವಾಲು

ಆಡಳಿತ ಪಕ್ಷದ ಪರ ಅಲೆ. ಮೋದಿ ಮೇನಿಯಾ ಕೆಲಸ ಮಾಡುತ್ತೆ ಅಂತಾನೇ ಬಿಜೆಪಿ ನಾಯಕರು ಬಹಳ ಹುಮ್ಮಸ್ಸಿನಲ್ಲಿದ್ದರು. ಆದರೆ ಮತದಾರ ಪ್ರಭುಗಳ ತೀರ್ಮಾನದಲ್ಲಿ ಹೀನಾಯವಾಗಿ ಸೋಲುಂಡರು. ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೆ ಬಿಜೆಪಿ ಕೇವಲ 66 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು. ಮೊದಲೇ ಸೋಲಿನ ಆಘಾತದಲ್ಲಿರುವ ಬಿಜೆಪಿಗೆ ಈಗ ಆಂತರಿಕ ಕಿತ್ತಾಟ ಸವಾಲಾಗಿ ಪರಿಣಮಿಸಿದೆ.

ಚುನಾವಣೆ ಸೋಲಿನ ಬಳಿಕ ಒಳಒಪ್ಪಂದ, ಆರೋಪ ಪ್ರತ್ಯಾರೋಪ, ನಾಯಕರ ಕೆಸರೆರೆಚಾಟ, ಕಾರ್ಯಕರ್ತರ ಆಕ್ರೋಶ ಹೀಗೆ ಒಂದರ ಬೆನ್ನಲ್ಲೊಂದರಂತೆ ಹೊರಬರುತ್ತಿರುವ ಅಸಮಾಧಾನದ ಹೊಗೆ ತಣಿಸುವುದು ವರಿಷ್ಠರಿಗೆ ಸವಾಲಾಗಿದೆ. ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯ ಮೊದಲೇ ಈ ಗೊಂದಲಗಳನ್ನು ನಿವಾರಿಸುವುದೇ ತಲೆನೋವಾಗಿ ಮಾರ್ಪಟ್ಟಿದೆ. ಈ ಸೋಲಿಗೆ ಕಾರಣ ಏನು? ಯಾರು? ಎಂಬ ಕುರಿತಾಗಿ ಹಲವು ನಾಯಕರು ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ಪ್ರತಾಪ ಸಿಂಹ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳು ಗೊಂದಲಗಳನ್ನು ತೀವ್ರಗೊಳಿಸುತ್ತಿದೆ.

ಇದನ್ನೂ ಓದಿ : ಬಿಜೆಪಿ ನಾಯಕನಾಗಲು ಒಂದೇ ಒಂದು ಮನುಷ್ಯಾಕೃತಿ ಇಲ್ಲ! – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟಾಸ್ತ್ರ

ಸೋಲಿಗೆ ಕಾರಣಗಳ ಕುರಿತಾಗಿ ವಿಮರ್ಶೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ ಅವರು ಹೊಂದಾಣಿಕೆ ರಾಜಕಾರಣದ ಕುರಿತಾಗಿ ನೀಡಿರುವ ಹೇಳಿಕೆ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇದಕ್ಕೆ ಪೂರಕ ಎಂಬಂತೆ ಸಿ.ಟಿ ರವಿ ಕೂಡಾ ಹೇಳಿಕೆ ನೀಡಿದ್ದರು. ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಆದರೆ ಇದಕ್ಕೆ ಪಕ್ಷದಲ್ಲೇ ತೀಕ್ಷ್ಣವಾಗಿ ವಿರೋಧ ವ್ಯಕ್ತವಾಗಿತ್ತು. ಈ ಆರೋಪಕ್ಕೆ ಹುರುಳಿಲ್ಲ ಎಂದು ನಾಯಕರು ಸಮಜಾಯಿಷಿ ನೀಡಿದ್ದರು. ಈ ಆರೋಪದ ಹಿಂದೆ ರಾಷ್ಟ್ರೀಯ ನಾಯಕರೊಬ್ಬರು ಇದ್ದಾರೆ ಎಂಬ ಮಾತನ್ನು ಬಿಜೆಪಿ ರಾಜ್ಯ ನಾಯಕರು ಪರೋಕ್ಷ ಅಸಮಾಧಾನವನ್ನು ಹೊರಹಾಕಿದ್ದರು.

ಇದರ ನಡುವೆ ಕೆ.ಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಕೂಡ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ. ವಲಸಿಗ ನಾಯಕರಿಂದ ಪಕ್ಷದ ಶಿಸ್ತು ಕಡಿಮೆಯಾಗಿದೆ ಎಂದು ಹೇಳಿದ್ದು ಇದಕ್ಕೆ ಭೈರತಿ ಬಸವರಾಜ್ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಭಿನ್ನಾಭಿಪ್ರಾಯವೂ ಬೀದಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಇಬ್ಬರು ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ನನ್ನನ್ನು ಸೋಲಿಸಲು ಹಣ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಆರೋಪ ಮಾಡಿದ್ದರೆ, ನಾನು ತಲೆಗೆ ಟೋಪಿ ಹಾಕಿ ನಮಾಜ್ ಮಾಡಿಲ್ಲ ಎಂದು ಯತ್ನಾಳ್ ವಿರುದ್ಧ ನಿರಾಣಿ ಗುಡುಗಿದ್ದಾರೆ.

ಹೀಗೆ ಸಾಲು ಸಾಲಾಗಿ ಆರೋಪ ಪ್ರತ್ಯಾರೋಪಗಳು ಬಿಜೆಪಿಯ ಕಾರ್ಯಕರ್ತರ ಕಂಗೆಡಿಸಿದೆ. ಈಗಾಗಲೇ ರಾಜ್ಯದಲ್ಲಿ ಕಂಡಿರುವ ಹೀನಾಯ ಸೋಲು ಒಂದು ಕಡೆಯಾದರೆ ಒಂದು ವರ್ಷದಲ್ಲಿ ಎದುರಾಗುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ಸದನದ ಒಳಗೆ ಮತ್ತು ಹೊರಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ನಿಟ್ಟಿನಲ್ಲಿ ಸಮರ್ಥ ವಿಪಕ್ಷ ನಾಯಕನ ಅಗತ್ಯವಿದೆ. ಆದರೆ ಈ ಆಯ್ಕೆ ಇನ್ನೂ ಆಗಿಲ್ಲ. ವಿಪಕ್ಷ ನಾಯಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿಬರುತ್ತಿದೆ. ಜೊತೆಗೆ ಆರ್‌. ಅಶೋಕ್, ಅಶ್ವತ್ಥ ನಾರಾಯಣ ಹೆಸರು ಇದೆ. ಮತ್ತೊಂದು ಕಡೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯೂ ಬದಲಾವಣೆ ಆಗಬೇಕಾಗಿದೆ. ಆದರೆ ಪಕ್ಷದಲ್ಲಿ ಕಂಡುಬರುತ್ತಿರುವ ಒಳಬೇಗುದಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ವರಿಷ್ಠರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.

suddiyaana