ಕಲ್ಪವೃಕ್ಷ ತೆಂಗು ಬೆಳೆಗಾರರಿಗೆ ಸಾಲು ಸಾಲು ಸಂಕಷ್ಟ – ಕೊಬ್ಬರಿಯಿಂದ ಇಷ್ಟೆಲ್ಲಾ ಉಪಯೋಗ ಇದ್ರೂ ಸಿಗ್ತಿಲ್ಲ ಲಾಭ

ಕಲ್ಪವೃಕ್ಷ ತೆಂಗು ಬೆಳೆಗಾರರಿಗೆ ಸಾಲು ಸಾಲು ಸಂಕಷ್ಟ – ಕೊಬ್ಬರಿಯಿಂದ ಇಷ್ಟೆಲ್ಲಾ ಉಪಯೋಗ ಇದ್ರೂ ಸಿಗ್ತಿಲ್ಲ ಲಾಭ

ತೆಂಗು ಬೆಳೆ ಅಂದ್ರೆ ಕೇವಲ ಕೊಬ್ಬರಿ ಮಾತ್ರವಲ್ಲ ಹಲವು ಉಪಯೋಗಗಳಿವೆ. ಹಲವು ಜಿಲ್ಲೆಗಳ ರೈತರು ತೆಂಗು ಬೆಳೆಯನ್ನೇ ಪ್ರಧಾನವಾಗಿ ಅವಲಂಬಿಸಿದ್ದಾರೆ. ಮಂಡ್ಯದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎಳೆನೀರಿನಿಂದ ಗಂಜಿಯನ್ನು ಬೇರ್ಪಡಿಸಿ ಉಪ ಉತ್ಪನ್ನವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಗಂಜಿಯನ್ನು ಐಸ್ ಕ್ರೀಂ ಹಾಗೂ ಜ್ಯೂಸ್​ಗೆ ಬಳಕೆ ಮಾಡಲಾಗುತ್ತಿದೆ. ಕೊಬ್ಬರಿ ಎಣ್ಣೆ, ಕೋಕೋ ಪೀಟ್ ಉತ್ಪಾದಿಸಲಾಗುತ್ತಿದೆ. ಅದರಲ್ಲೂ ವರ್ಜಿನ್ ತೆಂಗಿನಕಾಯಿ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ.  ತೆಂಗಿನಕಾಯಿಯನ್ನು ತುರಿದು ಚೆನ್ನಾಗಿ ಒಣಗಿಸಿ, ಪುಡಿ ಮಾಡಿ, ಪ್ಯಾಕ್ ಮಾಡಿ ಮಾರಾಟ ಮಾಡುವ ಘಟಕಗಳೂ ರಾಜ್ಯದಲ್ಲಿವೆ. ತೆಂಗು ಬೆಳೆ ಇಲ್ಲದ ರಾಜ್ಯಗಳಲ್ಲಿ ಈ ಒಣಗಿಸಿದ ತೆಂಗಿನಕಾಯಿ ಪುಡಿಯನ್ನು ಅಡುಗೆಗೆ ಬಳಸುತ್ತಾರೆ. ಹೀಗಾಗೇ ತೆಂಗು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ನಂಬರ್ 2 ಸ್ಥಾನದಲ್ಲಿದೆ.

ಇದನ್ನೂ ಓದಿ : ಇಂದಿರಾ ಕ್ಯಾಂಟೀನ್’ನಲ್ಲಿ ಇನ್ಮುಂದೆ ಸಿಗಲಿದೆ ಮುದ್ದೆ, ಚಪಾತಿ ಭಾಗ್ಯ!

ಒಂದೂವರೆ ದಶಕದಿಂದ ತೆಂಗಿಗೆ ಬಾಧಿಸುತ್ತಿರುವ ನುಸಿಪೀಡೆಯಿಂದ ಇಳುವರಿ ಕಡಿಮೆಯಾಗಿದೆ. ಇದರ ನಡುವೆ ಬೆಲೆ ಕುಸಿತದಿಂದ ರೈತರು ಮತ್ತಷ್ಟು ಬಸವಳಿದಿದ್ದಾರೆ. ಹೆಚ್ಚು ತೆಂಗು ಬೆಳೆಯುವ ಕೇರಳ, ತಮಿಳುನಾಡು ರಾಜ್ಯದಲ್ಲಿ ಈಗಲೂ ಒಂದು ಕಾಯಿ ದರ 7 ರಿಂದ 8 ರೂಪಾಯಿ ಇದೆ. ಆದ್ರೆ ಕರ್ನಾಟಕದಲ್ಲಿ 3ರಿಂದ ನಾಲ್ಕು ರೂಪಾಯಿ ಮಾತ್ರವೇ ಇದೆ. ಈ ಬಾರಿ ವಿಪರೀತ ಬಿಸಿಲಿನಿಂದ ತೆಂಗಿನ ಮರದಲ್ಲಿ ಹರಳು ಉದುರಿದ್ದು ಇಳುವರಿಯೂ ಇಲ್ಲವಾಗಿದೆ. ದೇಶದಲ್ಲಿ ಒಟ್ಟು 1.9 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಕೇರಳದಲ್ಲಿ ಅತಿ ಹೆಚ್ಚು ಅಂದ್ರೆ 7.81 ಲಕ್ಷ, ಕರ್ನಾಟಕದಲ್ಲಿ 4.19 ಲಕ್ಷ ಹೆಕ್ಟೇರ್‌ ನಲ್ಲಿ ತೆಂಗಿನ ಬೆಳೆ ಇದೆ. ಪ್ರತಿ ವರ್ಷ ಕರ್ನಾಟಕದಿಂದ 2,176 ಮಿಲಿಯನ್‌ ತೆಂಗಿನಕಾಯಿ ಬೆಳೆಯುತ್ತಿದ್ದು ದೇಶದ ಒಟ್ಟು ಉತ್ಪಾದನೆಯ ಶೇ.13.83 ರಷ್ಟಿದೆ. ಒಂದು ಹೆಕ್ಟೇರ್‌ನಲ್ಲಿ 5,193 ಕಾಯಿ ಉತ್ಪಾದನೆ ಆಗುತ್ತದೆ. ತುಮಕೂರು ಜಿಲ್ಲೆ ನಂಬರ್ 1 ಸ್ಥಾನದಲ್ಲಿದ್ದು ರಾಜ್ಯದ ಒಟ್ಟು ಉತ್ಪಾದನೆಯ ಶೇ. 85 ರಷ್ಟು ಇಲ್ಲಿ ಬೆಳೆಯಲಾಗುತ್ತೆ. ಉಳಿದಂತೆ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ.

ಇದೆಲ್ಲದರ ನಡುವೆ ಕೊಬ್ಬರಿ ಬೆಲೆ ಬಗ್ಗೆ ವಿಧಾನಸಭಾ ಚುನಾವಣೆ ವೇಳೆ ಡಿ.ಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಯಾಗ್ತಿದೆ. ಡಿಕೆಶಿಯವರು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ 24 ಗಂಟೆಯೊಳಗೆ ಕ್ವಿಂಟಾಲ್ ಕೊಬ್ಬರಿಗೆ 15,000 ಕೊಡಿಸೋದಾಗಿ ಹೇಳಿದ್ದರು. ಆದ್ರೀಗ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದ್ರೂ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದು ವಿಪಕ್ಷ ನಾಯಕರು ಕಿಡಿ ಕಾರುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಅಂದ್ರೆ ನಫೆಡ್ ನಿಂದ ಕೊಬ್ಬರಿ ಖರೀದಿಗೆ ಅನುಮತಿ ನೀಡಿದೆ. ಆದ್ರೆ ಇಲ್ಲೂ ಕೂಡ ರೈತರಿಗೆ ಯಾವುದೇ ಲಾಭವಾಗ್ತಿಲ್ಲ. ಕೇಂದ್ರ ಸರ್ಕಾರ ಫೆಬ್ರವರಿ 2ರಿಂದ ನಫೆಡ್ ಕೇಂದ್ರ ಪ್ರಾರಂಭಿಸಿದ್ದು, ಆರು ತಿಂಗಳೊಳಗೆ ಸುಮಾರು 54,750 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲು ಅನುಮತಿ ನೀಡಿತ್ತು. ರೈತರಿಂದ ಪ್ರತಿ ಎಕರೆಗೆ 6 ಕ್ವಿಂಟಲ್‌ನಂತೆ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಲ್‌ ಕೊಬ್ಬರಿ ಖರೀದಿಸಲು ಅನುಮತಿ ನೀಡಿತ್ತು. ಪ್ರಸ್ತುತ ಕೊಬ್ಬರಿ ಬೆಲೆ 8,500 ರೂಪಾಯಿ ಇದೆ. ಹೀಗಾಗಿ ಸರ್ಕಾರ 11,730 ರೂಪಾಯಿಗೆ ಖರೀದಿಸುವಂತೆ ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರ ಕೂಡ ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಮಾರುವ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 1,250 ರೂಪಾಯಿ ಪ್ರೋತ್ಸಾಹ ಬೆಲೆ ನೀಡುವ ಘೋಷಣೆ ಮಾಡಿತ್ತು. ಆದ್ರೆ ನಫೆಡ್ ಖರೀದಿ ಕೇಂದ್ರಗಳು ಬಂದ್ ಆಗಿರುವುರಿಂದ ಕೊಬ್ಬರಿ ಬೆಳೆಗಾರರಿಗೆ ಪ್ರೋತ್ಸಾಹ ಬೆಲೆಯೂ ಸಿಗ್ತಿಲ್ಲ. ನಫೆಡ್ ಮೂಲಕ ರೈತರು ಕೊಬ್ಬರಿ ಮಾರಿದರೆ ಒಂದು ಕ್ವಿಂಟಾಲ್ ಗೆ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಬೆಲೆ ಎರಡೂ ಸೇರಿ 13 ಸಾವಿರ ರೂಪಾಯಿ ಬೆಲೆ ಸಿಗುತ್ತದೆ. ಆದ್ರೀಗ ನಫೆಡ್ ಕೇಂದ್ರ ತೆರೆಯದ ಕಾರಣ ರೈತರು ಕೊಬ್ಬರಿಯನ್ನು ಕೇವಲ 8 ಸಾವಿರಕ್ಕೆ ಮಾರುವಂತಾಗಿದೆ.

ರಾಜ್ಯದಲ್ಲಿ 2.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಕೊಬ್ಬರಿಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಕಳೆದ ಐದಾರು ವರ್ಷಗಳಿಂದ ಒಣ ಬರ ಮತ್ತು ಹಸಿ ಬರಗಳಿಂದ ತೆಂಗು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಜೊತೆಗೆ ಕಪ್ಪು ಮತ್ತು ಕೆಂಪು ಮೂತಿ ಕೀಟಗಳ ಬಾಧೆ, ಬೊಡ್ಡೆ ರಸ ಸೋರುವ ರೋಗ, ಕಪ್ಪು ಚುಕ್ಕೆ ರೋಗ, ಗರಿ ಉದುರುವ ರೋಗಗಳಿಗೆ ತೆಂಗಿನಮರಗಳು ಬಲಿಯಾಗುತ್ತಿವೆ. ಇದರ ನಡುವೆ ಕೊಬ್ಬರಿ ಖರೀದಿ ಕೇಂದ್ರ ನಫೆಡ್‌ನ್ನು ಏಕಾಏಕಿ ಮುಚ್ಚಿರುವ ಕಾರಣ ರೈತರಿಗೆ ದಿಕ್ಕೇ ತೋಚದಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲೂ ನಿಗಧಿ ಪಡಿಸಿದ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲಾಗುತ್ತಿದೆ. ಇದು ಕೂಡ ರೈತರನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇನ್ನಾದ್ರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಂಗು ಬೆಳೆಗಾರರ ಪರ ನಿಲ್ಲಬೇಕಿದೆ. ಸೂಕ್ತ ಬೆಲೆಗೆ ಕೊಬ್ಬರಿ ಖರೀದಿಸುವ ಮೂಲಕ ರೈತರ ಬದುಕಲ್ಲಿ ಭರವಸೆ ಮೂಡಿಸಬೇಕಿದೆ.

Shantha Kumari