ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ

ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ

ಲೋಕಸಭಾ ಚುನಾವಣೆ ಹೊತ್ತಲ್ಲೇ ದೇಶದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ಚುನಾವಣೆಗೆ ಕೆಲವೇ ವಾರಗಳಿರುವಾಗಲೇ ಕೆಲ ನಾಯಕರು ರಾಜೀನಾಮೆ ನೀಡುತ್ತಿದ್ದರೆ, ಇನ್ನೂ ಕೆಲವರು ಪಕ್ಷಾಂತರ ಪರ್ವ ನಡೆಸುತ್ತಿದ್ದಾರೆ. ಇದೀಗ  ಹರಿಯಾಣದಲ್ಲೂ ಹೊಸ ರಾಜಕೀಯ ಬೆಳವಣಿಗೆ ನಡೆದಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜೀನಾಮೆ ನೀಡಿದ್ದಾರೆ.

ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಮಂಗಳವಾರ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ಮನೋಹರ್ ಲಾಲ್ ಖಟ್ಟರ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ನೀರಿಲ್ಲ, ಆರ್‌ಸಿಬಿ ಪಂದ್ಯ ನೋಡೋಕೆ ಆಗಲ್ಲ..! – ಜಲಕಂಟಕದಿಂದಾಗಿ ಮ್ಯಾಚ್ ಶಿಫ್ಟ್ ಮಾಡುವಂತೆ ಒತ್ತಾಯ

ಹರ್ಯಾಣದಲ್ಲಿ ಬಿಜೆಪಿ ಮತ್ತು ಜನನಾಯಕ್ ಜನತಾ ಪಕ್ಷ ಗಳ ನಡುವೆ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಮಾತುಕತೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳ ನಡುವೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟ ವಿಸರ್ಜಿಸಿ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಮತ್ತು ಜೆಜೆಪಿ (ಜನನಾಯಕ ಜನತಾ ಪಕ್ಷ) ಎರಡೂ ಪಕ್ಷಗಳ ವರಿಷ್ಠರು ಆಯಾ ಶಾಸಕರ ಪ್ರತ್ಯೇಕ ಸಭೆಗಳನ್ನು ಕರೆದಿದ್ದಾರೆ. ಅದಕ್ಕೂ ಮುನ್ನ ಖಟ್ಟರ್ ಅವರು ತಮ್ಮ ನಿವಾಸದಲ್ಲಿ ಬಿಜೆಪಿಯ ಎಲ್ಲ ಸಚಿವರ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.

90 ಸದಸ್ಯ ಬಲದ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ ಎಂದು ಮೂಲಗಳು ತಿಳಿಸಿವೆ. ದುಶ್ಯಂತ್ ಚೌತಾಲಾ ಅವರ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಇಲ್ಲಿಯವರೆಗೆ ಬಿಜೆಪಿ ಆಡಳಿತ ನಡೆಸುತ್ತಿತ್ತು.

Shwetha M