3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಮೃತದೇಹದ ಫೋಟೋಗಳು ವೈರಲ್ – ಮಣಿಪುರದಲ್ಲಿ ಮತ್ತೆ ಉದ್ವಿಘ್ನ ಸ್ಥಿತಿ ನಿರ್ಮಾಣ
ಮಣಿಪುರದಲ್ಲಿ ನಾಲ್ಕು ತಿಂಗಳಿಂದ ಹಿಂಸಾಚಾರ ನಡೆಯುತ್ತಿದ್ದು, ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ ಇಡೀ ರಾಜ್ಯದಲ್ಲಿ ಮತ್ತೊಮ್ಮೆ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಮಣಿಪುರದಿಂದ ಭಯಾನಕ ಸುದ್ದಿಯೊಂದು ಹೊರಬಿದ್ದಿದೆ. ಜುಲೈನಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಣಿಪುರದಲ್ಲಿ ಹತ್ಯೆ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಮೃತ ದೇಹಗಳ ಚಿತ್ರಗಳು ಹೊರಬಿದ್ದಿವೆ. ಹೊರಬಿದ್ದ ಎರಡೂ ಚಿತ್ರಗಳಲ್ಲಿ ವಿದ್ಯಾರ್ಥಿಗಳಿಬ್ಬರ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಆದರೆ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳು ಇನ್ನೂ ಕೂಡ ಪತ್ತೆಯಾಗಿಲ್ಲ.
ಇದನ್ನೂ ಓದಿ : ಬಿಜೆಪಿ ಶಾಸಕರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ!
ವೈರಲ್ ಆಗಿರುವ ಛಾಯಾಚಿತ್ರಗಳು ಮೈಟಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳನ್ನು ತೋರಿಸುತ್ತವೆ. ಅವರನ್ನು 17 ವರ್ಷದ ಹಿಜಾಮ್ ಲಿಂಥೋಯಿಂಗಂಬಿ ಮತ್ತು 20 ವರ್ಷದ ಫಿಜಾಮ್ ಹೇಮ್‌ಜಿತ್ ಎಂದು ಗುರುತಿಸಲಾಗಿದೆ. ಅವರು ಸಶಸ್ತ್ರ ಗುಂಪಿನೊಂದಿಗೆ ಅರಣ್ಯ ಶಿಬಿರದಲ್ಲಿ ಹುಲ್ಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಚಿತ್ರದಲ್ಲಿ ಕಾಣಬಹುದು. ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮಣಿಪುರದಲ್ಲಿ ಉದ್ವಿಘ್ನ ಸ್ಥೀತಿ ನಿರ್ಮಾಣವಾಗಿದೆ. ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.. ಕೊಲೆಗಾರರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಣಿಪುರ ಸರ್ಕಾರ ಹೇಳಿದೆ.
ಜುಲೈನಲ್ಲಿ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೇಮ್‌ಜಿತ್ ಎಂಬ ಇಬ್ಬರು ವಿದ್ಯಾರ್ಥಿಗಳು ಕಾಣಿಸಿಕೊಂಡಿದ್ದರು. ಅಂದಿನಿಂದ ಅವರ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದೀಗ ಇದ್ದಕ್ಕಿದ್ದಂತೆ ಅವರ ಮೃತದೇಹದ ಫೋಟೋ ಹೊರಬಿದ್ದಿದೆ. ಮೊದಲ ಫೋಟೋದಲ್ಲಿ, ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೆಮ್ಜಿತ್ ಕುಳಿತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ಹಿಜಾಮ್ ಬಿಳಿ ಟಿ ಶರ್ಟ್ ಮತ್ತು ಫಿಜಾಮ್ ಹೇಮ್‌ಜಿತ್ ಚೆಕ್ ಶರ್ಟ್ ಧರಿಸಿದ್ದಾರೆ. ಅವರ ಹಿಂದೆ ಬಂದೂಕು ಹಿಡಿದ ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ. ಎರಡನೇ ಫೋಟೋದಲ್ಲಿ, ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಂಬಿ ಮತ್ತು ಫಿಜಾಮ್ ಹೆಮ್‌ಜಿತ್ ಅವರ ದೇಹಗಳು ಪೊದೆಗಳ ನಡುವೆ ಬಿದ್ದಿರುವುದು ಕಂಡುಬರುತ್ತದೆ. ಆದಾಗ್ಯೂ ಎರಡು ಶವಗಳು ಮಣಿಪುರದ ಯಾವ ಪ್ರದೇಶದಲ್ಲಿವೆ ಎಂಬುದನ್ನು ಸರ್ಕಾರ ಇನ್ನೂ ಕಂಡುಹಿಡಿಯುತ್ತಿದೆ. ಪೊಲೀಸರು ಮತ್ತು ತನಿಖಾ ಸಂಸ್ಥೆ ಶವ ಪತ್ತೆಗೆ ಪ್ರಯತ್ನಿಸುತ್ತಿದೆ. ಈ ಪ್ರಕರಣ ಇಡೀ ದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಇಷ್ಟು ದಿನ ಬೇಕಾಯಿತು ಎಂದು ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಜುಲೈನಲ್ಲಿ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವಿದ್ಯಾರ್ಥಿಗಳಿಬ್ಬರೂ ಪತ್ತೆಯಾಗಿದ್ದರೂ ಅವರನ್ನು ಪೊಲೀಸರು ಪತ್ತೆ ಮಾಡಿಲ್ಲ. ಈ ಪೊಲೀಸರು ಮತ್ತು ಸರ್ಕಾರ ಹೇಗೆ ಕೆಲಸ ಮಾಡುತ್ತಿವೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.