ಆಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗ ಸೇರಿ ಮೂವರು ಸಜೀವದಹನ

ಆಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು – ತಾಯಿ, ಮಗ ಸೇರಿ ಮೂವರು ಸಜೀವದಹನ

ಜನಾಂಗೀಯ ಗಲಾಟೆಯಲ್ಲಿ ಬೇಯುತ್ತಿರುವ ಮಣಿಪುರ ಶಾಂತವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಾವು ನೋವು ಹೆಚ್ಚುತ್ತಲೇ ಇದೆ. ಇದೀಗ ಗುಂಡೇಟಿನಿಂದ ಗಾಯಗೊಂಡಿದ್ದ 8 ವರ್ಷದ ಮಗು, ಅವರ ತಾಯಿ ಹಾಗೂ ಸಂಬಂಧಿಕರೋರ್ವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ಜನರ ಗುಂಪೊಂದು ತಡೆದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಇಂಫಾಲ್‌ನಲ್ಲಿ ನಡೆದಿದೆ.

ಶೂಟೌಟ್ ಸಮಯದಲ್ಲಿ 8 ವರ್ಷದ ಬಾಲಕ ತಾನ್ಸಿಂಗ್ ಹ್ಯಾಂಗ್‌ಸಿಂಗ್ ತಲೆಗೆ ಗುಂಡೇಟು ತಗುಲಿ ಗಾಯವಾಗಿತ್ತು. ಬಾಲಕನನ್ನು ಅವರ ತಾಯಿ ಮೀನಾ ಹ್ಯಾಂಗ್‌ಸಿಂಗ್ ಹಾಗೂ ಸಂಬಂಧಿಕರೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ದುಷ್ಕರ್ಮಿಗಳು ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಐರೋಸೆಂಬಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಪ್ರದೇಶದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ : ಕಲುಷಿತ ನೀರು ಸೇವನೆಗೆ ಮತ್ತೊಂದು ಬಲಿ – ಕೊಪ್ಪಳದಲ್ಲಿ 10 ವರ್ಷದ ಬಾಲಕಿ ಸಾವಿಗೆ ಜನರ ಆಕ್ರೋಶ

ತಾನ್ಸಿಂಗ್ ಹಾಗೂ ಆತನ ತಾಯಿ ಕಾಂಗ್‌ಚುಪ್‌ನಲ್ಲಿರುವ ಪರಿಹಾರ ಶಿಬಿರದಲ್ಲಿ ತಂಗಿದ್ದರು. ತಾನ್ಸಿಂಗ್ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮಗನಾಗಿದ್ದು, ತಾಯಿ ಮೇಟಿ ಸಮುದಾಯಕ್ಕೆ ಸೇರಿದವರು. ಜೂನ್ 4 ರಂದು ಸಂಜೆ ಪ್ರದೇಶದಲ್ಲಿ ಗುಂಡಿನ ಕಾಳಗ ಪ್ರಾರಂಭವಾದಾಗ, ಶಿಬಿರದಲ್ಲಿದ್ದರೂ ಬಾಲಕನಿಗೆ ಬುಲೆಟ್ ಹೊಡೆದಿದೆ. ಅಸ್ಸಾಂ ರೈಫಲ್ಸ್ ಹಿರಿಯ ಅಧಿಕಾರಿಯೊಬ್ಬರು ತಕ್ಷಣವೇ ಇಂಫಾಲ್‌ನಲ್ಲಿ ಪೊಲೀಸರೊಂದಿಗೆ ಮಾತನಾಡಿ ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಿದರು. ತಾಯಿ ಬಹುಸಂಖ್ಯಾತ ಸಮುದಾಯದಿಂದ ಬಂದಿದ್ದರಿಂದ, ಮಗುವನ್ನು ರಸ್ತೆಯ ಮೂಲಕ ಇಂಫಾಲ್‌ನಲ್ಲಿರುವ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಸ್ಸಾಂ ರೈಫಲ್ಸ್ ಆಂಬ್ಯುಲೆನ್ಸ್ ಅನ್ನು ಕೆಲವು ಕಿಲೋಮೀಟರ್‌ಗಳವರೆಗೆ ಬೆಂಗಾವಲು ಮಾಡಿದ ನಂತರ ಸ್ಥಳೀಯ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಐಸೊಸೆಂಬಾದಲ್ಲಿ ಜನರ ಗುಂಪೊಂದು ಆಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದೆ. ಪರಿಣಾಮ ವಾಹನದಲ್ಲಿದ್ದ ಮೂವರೂ ಸಜೀವದಹನವಾಗಿದ್ದಾರೆ. ಈ ಮೊದಲು ಮಣಿಪುರದ ಸುಗ್ನು- ಸೆರೋ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದಂಗೆಕೋರರ ದಾಳಿಗೆ ಬಿಎಸ್‌ಎಫ್‌ ಯೋಧರೊಬ್ಬರು ಬಲಿಯಾಗಿದ್ದಾರೆ. ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಏಪ್ರಿಲ್ 19 ರ ಮಣಿಪುರ ಹೈಕೋರ್ಟ್ ನಿರ್ದೇಶನದ ನಂತರ ರಾಜ್ಯದ ಮೇಟಿ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಮೇ 3 ರಂದು ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ಎಟಿಎಸ್‌ಯು) ಆಯೋಜಿಸಿದ್ದ ರ್ಯಾಲಿ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ತದನಂತರ ಹಿಂಸಾಚಾರ ಉದ್ವಿಗ್ನಗೊಂಡಿದೆ.

suddiyaana