ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ- 2,000 ಅಡಿ ಆಳದಲ್ಲಿತ್ತು ಶ್ರೀನಂದಾ ಮೃತದೇಹ

ಕಳೆದ ಮೂರು ದಿನಗಳ ಹಿಂದೆ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರೀನಂದಾ ಮೃತದೇಹ ಇಂದು ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಶ್ರೀನಂದಾ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಹಿಂದಿ ಪರೀಕ್ಷೆಯಲ್ಲಿ 100ಕ್ಕೆ 111 ಮಾರ್ಕ್ಸ್! – ಈ ಎಡವಟ್ಟಿಗೆ ಯಾರು ಹೊಣೆ!
ಏ. 7 ರಂದು ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಶ್ರೀನಂದಾ ಬಂದಿದ್ದಳು. ತನ್ನ ತಂಡದವರೊಂದಿಗೆ ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶ್ರೀನಂದಾ ಏಕಾಏಕಿ ನಾಪತ್ತೆಯಾಗಿದ್ದಳು. ಕೂಡಲೇ ಆಕೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಬಾಲಕಿಯ ಪತ್ತೆಗಾಗಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ನಾಪತ್ತೆಯಾದ ಮೂರು ದಿನಗಳ ಬಳಿಕ ಆಕೆಯ ಮೃತದೇಹ ಪತ್ತೆಯಾಗಿದೆ. ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಈಗಾಗಲೇ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನೋಡಿರಿ

