ಮಾಣಿಕ್ಯಧಾರಾ ಜೊತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ

ಮಾಣಿಕ್ಯಧಾರಾ ಜೊತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ

ಮುಜರಾಯಿ ಇಲಾಖೆಯ ಒಡೆತನದಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾ ಜೊತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಗೊಳ್ಳುತ್ತಿವೆ. ಈ ಪ್ರವಾಸಿ ತಾಣಗಳ ಮೇಲೆ ಹದ್ದಿನಕಣ್ಣು ಇಡುವುದರ ಜೊತೆಗೆ, ಹೊಸ ರೂಪುರೇಷೆಗಳನ್ನು ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಇತ್ತೀಚೆಗೆ, ಕೊಡಗಿನಲ್ಲಿ ಕಾಣೆಯಾಗಿದ್ದ ಯುವತಿ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದಳು. ಆದರೆ ಇದಾದ ಕೆಲದಿನಗಳ ಬಳಿಕ ಚಿಕ್ಕಮಗಳೂರಿನ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಗಿರಿಸಾಲುಗಳ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆ ಹೆಗಲಿಗೆ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಾಣಿಕ್ಯಧಾರಾ ವ್ಯಾಪ್ತಿಯಲ್ಲಿ ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಸ್ಥರ ಜೊತೆಗೆ ಸಾರ್ವಜನಿಕರಿಂದಲೂ ಶುಚಿತ್ವದ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ಹಾಗೂ ನಿರ್ವಹಣೆಯ ಬಗ್ಗೆ ಸಾಕಷ್ಟು ಅಪಸ್ವರಗಳು ಕೇಳಿಬಂದಿದ್ದವು. ಹೀಗಾಗಿ, ಜಿಲ್ಲಾಡಳಿತವು ಗಿರಿಸಾಲಿನ ಪ್ರವಾಸಿ ತಾಣಗಳ ನಿರ್ವಹಣೆ ಹೊಣೆಗಾರಿಕೆಯನ್ನು ಪ್ರವಾಸೋದ್ಯಮ ಇಲಾಖೆಗೆ ಕೊಡಲು ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಜವಾಬ್ದಾರಿ ಹಸ್ತಾಂತರವಾಗಲಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್‌ ಪ್ರಿಯರಿಗೆ ಮಹತ್ವದ ಸುದ್ದಿ! – ರಾಜ್ಯದಲ್ಲಿ ಚಾರಣಕ್ಕೆ ಹೋಗುವವರಿಗೆ ಹೊಸ ರೂಲ್ಸ್!

 ಪ್ರವಾಸಿ ಮಿತ್ರರನ್ನು ಆಯ್ದ ಸ್ಥಳದಲ್ಲಿ ನೇಮಕ ಮಾಡಲಾಗುತ್ತಿದೆ. ಈಗಾಗಲೇ ಎನ್.ಆರ್​.ಪಿ. ಕ್ಯಾಮೆರಾ ಜೊತೆಗೆ ಮಾಣಿಕ್ಯಧಾರಾ ಸೇರಿದಂತೆ ಪರ್ವತ ಸಾಲಿನ ಪ್ರವಾಸಿ ತಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗಿನ ಪ್ರವಾಸ ಸಮಯವನ್ನು ಮುಂಚಿತವಾಗಿ ಸಂಜೆ 5 ಗಂಟೆಗೆ ಇಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ.

ಚಿಕ್ಕಮಗಳೂರಿನ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇಲ್ಲಿಗೆ ಬರುವಂತಹ ಎಲ್ಲಾ ಸಾರ್ವಜನಿಕರಿಗೆ ಮನವಿ.. ಚಿಕ್ಕಮಗಳೂರು ಅತ್ಯದ್ಭುತವಾದ ಪ್ರವಾಸಿ ತಾಣ. ಇಲ್ಲಿಗೆ ಬರುವ ಪ್ರವಾಸಿಗರು ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ಇಲ್ಲಿನ ಪ್ರವಾಸಿತಾಣಗಳು ಮೂಲತಃ ನದಿ ಮೂಲಗಳು. ಬೆಟ್ಟ-ಗುಡ್ಡ ಅಧಿಕವಾಗಿವೆ. ಹೀಗಾಗಿ, ಪ್ರವಾಸಿಗರು ಪ್ಲಾಸ್ಟಿಕ್​ಗಳ ಬದಲು, ನೀರಿನ ಸ್ಟೀಲ್​ ಬಾಟಲ್​, ಕಾಗದದ ಕವರ್​ ಹಾಗೂ ಕಪ್​ಗಳನ್ನು ಬಳಸಬೇಕು. ಕಸವನ್ನು ಅಲ್ಲಲ್ಲಿ ಬಿಸಾಡದೇ ಕಸದ ಬುಟ್ಟಿಗೆ ಹಾಕಬೇಕು. ಎಲ್ಲಾ ಪ್ರವಾಸಿ ತಾಣಗಳನ್ನು ಭೇಟಿ ಮಾಡಿ, ಸುರಕ್ಷತೆಯಿಂದ ಹಿಂತಿರುಗಿ. ಮಾಣಿಕ್ಯಧಾರಾದಲ್ಲಿ ನಾವು ಈಗಾಗಲೇ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ಬೋರ್ಡ್​, ನೀರಿನ ಘಟಕ, ಕಸದ ಬುಟ್ಟಿ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ.

ಲೋಹಿತ್​, ಉಪ ನಿರ್ದೇಶಕ-ಪ್ರವಾಸೋದ್ಯಮ ಇಲಾಖೆ.

Kishor KV