ಎರಡನೇ ಅವಧಿಗೆ ತ್ರಿಪುರಾ ಸಿಎಂ ಆಗಿ ಪ್ರಮಾಣವಚನ – ಮಾಣಿಕ್ ಸಹಾ ರಾಜಕೀಯ ಹಾದಿ ಹೇಗಿತ್ತು ಗೊತ್ತಾ..?

ಎರಡನೇ ಅವಧಿಗೆ ತ್ರಿಪುರಾ ಸಿಎಂ ಆಗಿ ಪ್ರಮಾಣವಚನ – ಮಾಣಿಕ್ ಸಹಾ ರಾಜಕೀಯ ಹಾದಿ ಹೇಗಿತ್ತು ಗೊತ್ತಾ..?

ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಿದ್ದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸತತ ಎರಡನೇ ಅವಧಿಗೆ ತ್ರಿಪುರಾದ ಮುಖ್ಯಮಂತ್ರಿಯಾಗಿ ಡಾಕ್ಟರ್ ಮಾಣಿಕ್ ಸಹಾ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.

ಹಿಂದಿನ ಸರ್ಕಾರದಲ್ಲಿದ್ದ ನಾಲ್ವರು  ಸಚಿವರನ್ನು ಉಳಿಸಿಕೊಳ್ಳಲಾಗಿದ್ದು, ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಶಾಂತಾ ಚಕ್ಮಾ ಮತ್ತು ಸುಶಾಂತ ಚೌಧರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂತೆಯೇ ಬಿಜೆಪಿ ತನ್ನ ಶ್ರೇಣಿಯೊಳಗೆ ಮೂರು ಹೊಸ ಮಂತ್ರಿಗಳನ್ನು ಸೇರ್ಪಡೆಗೊಳಿಸಿದ್ದು, ಬಿಪ್ಲಬ್ ದೇಬ್ ಅವರ ನಿಕಟವರ್ತಿ ಟಿಂಕು ರಾಯ್, ಬಿಜೆಪಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ಮುಖ್ಯಸ್ಥ ಬಿಕಾಶ್ ದೆಬ್ಬರ್ಮಾ ಮತ್ತು ಸುಧಾಂಶು ದಾಸ್ ಕೂಡ ಪ್ರಮಾಣ ವಚನ ಸ್ವೀಕಿಸಿದರು.

ಇದನ್ನೂ ಓದಿ : ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ಪ್ರಮಾಣವಚನ ಸ್ವೀಕಾರ

ತ್ರಿಪುರಾದಲ್ಲಿ ಹೊಸದಾಗಿ ಚುನಾಯಿತರಾದ ಬಿಜೆಪಿ ಶಾಸಕರು ಸೋಮವಾರ ಶಾಸಕಾಂಗ ಪಕ್ಷದ ನಾಯಕನಾಗಿ ಸಹಾ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರು. ಇದರ ಬಳಿಕ ಅವರು ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಡಾ.ಸಹಾ ಅವರೊಂದಿಗೆ ಶಾಸಕರು ಕೂಡ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ 32 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ತಿಪ್ರಾ ಮೋಥಾ 13 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಮಾಣಿಕ್ ಸಹಾ 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2022ರ ಮಾರ್ಚ್​ನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. 2022 ರಲ್ಲಿ ಬಿಪ್ಲಬ್ ದೇಬ್ ಬದಲಿಗೆ ಡಾ ಮಾಣಿಕ್ ಸಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಬಿಜೆಪಿಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಸಹಾ 2020 ರಲ್ಲಿ ರಾಜ್ಯದಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದರು. ಆದಾಗ್ಯೂ ಅವರು ಮುಖ್ಯಮಂತ್ರಿಯಾಗುವ ಮೊದಲು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಮತ್ತೊಂದೆಡೆ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಮತ್ತು ಸಿಪಿಎಂ ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿವೆ.

suddiyaana