ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ಸಾಮಾನ್ಯವಾಗಿ ಫ್ರಿಡ್ಜ್‌, ಎಸಿ, ಮೊಬೈಲ್, ಲ್ಯಾಪ್ ಟಾಪ್, ವಾಹನಗಳನ್ನು ಇಎಂಐ ಮುಖಾಂತರ ಖರೀದಿಸುವುದನ್ನು ನೋಡಿದ್ದೇವೆ. ಇನ್ನು ಕಿರಾಣಿ ಅಂಗಡಿಗಳಲ್ಲಿ ಕೆಲ ವಸ್ತುಗಳನ್ನು ಸಾಲದ ರೂಪದಲ್ಲಿ ಖರೀದಿಸಲಾಗುತ್ತದೆ. ಎಂದಾದರೂ ಹಣ್ಣುಗಳನ್ನು ಇಎಂಐ ಮುಖಾಂತರ ಖರೀದಿಸುವುದನ್ನು ಕೇಳಿದ್ದೀರಾ? ಇಲ್ಲೊಬ್ಬ ವ್ಯಾಪಾರಿ ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು ಇಎಂಐ ಮುಖಾಂತರ ಖರೀದಿಸುವ ಅವಕಾಶ ಕಲ್ಪಿಸಿದ್ದಾರೆ.

ಹೌದು, ಅಲ್ಫೊನ್ಸೊ ತಳಿಯ ಮಾವಿನ ಹಣ್ಣಿನ ಬೆಲೆಗಳು ಗಗನಕ್ಕೇರಿದ್ದು, ಮಾವು ಪ್ರೇಮಿಗಳಿಗೆ ನಿರಾಸೆಯುಂಟಾಗಿದೆ. ಈ ಹೊತ್ತಲ್ಲಿ ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.  ಮಹಾರಾಷ್ಟ್ರದ ಪುಣೆಯ ವ್ಯಾಪಾರಿಯೊಬ್ಬರು ಮಾಸಿಕ ಕಂತುಗಳು ಅಥವಾ ಇಎಂಐನಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸುವ ಅವಕಾಶ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಚಂದ್ರನತ್ತ ಪ್ರಯಾಣಕ್ಕೆ ಸಜ್ಜಾದ ನಾಲ್ವರು ಗಗನಯಾನಿಗಳು – ಯಾರ್ಯಾರು & ಹೇಗಿದೆ ಸಿದ್ಧತೆ?

ಮಹಾರಾಷ್ಟ್ರದ ಗುರುಕೃಪಾ ಟ್ರೇಡರ್ಸ್ ಆಂಡ್‌ ಫ್ರುಟ್‌ ಪ್ರೊಡಕ್ಟ್ಸ್‌ನ ಗೌರವ್ ಸನಾಸ್ ಎಂಬುವವರು ಇಎಂಐನಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾವಿನಲ್ಲಿ ದೇವಗಡ ಮತ್ತು ರತ್ನಗಿರಿಯ ಅಲ್ಫೊನ್ಸೋ ಅಥವಾ ‘ಹಪುಸ್‌’ ಮಾವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಈ ಮಾವಿನ ಹಣ್ಣಿಗೆ ಡಜನ್‌ಗೆ 800 ರಿಂದ 1300 ರೂ.ವರೆಗೆ ದರವಿದೆ. ಗ್ರಾಹಕರು ಇಷ್ಟು ದುಬಾರಿ ಹಣ್ಣನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಹಕರನ್ನು ಸೆಳೆಯಲು ಗೌರವ್ ಈ ಪ್ಲಾನ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗೌರವ್ ಸನಾಸ್, ‘ತಮ್ಮ ಕುಟುಂಬದ ಔಟ್‌ಲೆಟ್ ಇಡೀ ದೇಶದಲ್ಲೇ ಮಾಸಿಕ ಕಂತುಗಳಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲ ಮಳಿಗೆ. ಮಾವಿನ ಹಣ್ಣಿನ ಋತುವಿನ ಆರಂಭದಲ್ಲಿ ಬೆಲೆಗಳು ಯಾವಾಗಲೂ ತುಂಬಾ ಹೆಚ್ಚಿರುತ್ತವೆ. ಫ್ರಿಡ್ಜ್‌, ಎಸಿಗಳು ಮತ್ತು ಇತರ ಉಪಕರಣಗಳನ್ನು ಇಎಂಐನಲ್ಲಿ ಖರೀದಿಸಬಹುದಾದರೆ ಮಾವಿನ ಹಣ್ಣನ್ನು ಏಕೆ ಖರೀದಿಸಬಾರದು ಅಂತಾ ನಾವು ಯೋಚಿಸಿದ್ದೇವೆ. ಮಾಸಿಕ ಕಂತುಗಳಿದ್ದಾಗ ಎಲ್ಲರಿಗೂ ಮಾವಿನ ಹಣ್ಣುಗಳನ್ನು ಖರೀದಿಸಲು ಸಾಧ್ಯವಾಗಲಿದೆ,” ಎಂದು ಗೌರವ ಸನಾಸ್‌ ತಿಳಿಸಿದ್ದಾರೆ.

ಮೊಬೈಲ್ ಫೋನ್‌ಗಳನ್ನು ಇಎಂಐನಲ್ಲಿ ಹೇಗೆ ಖರೀದಿಸಲಾಗುತ್ತದೋ, ಅದೇ ರೀತಿ ಮಾವಿನ ಹಣ್ಣುಗಳನ್ನು ಖರೀದಿಸಬಹುದಾಗಿದೆ. ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಮಾವಿನ ಹಣ್ಣನ್ನು ಖರೀದಿಸಬೇಕಾಗುತ್ತದೆ. ಪಾವತಿ ಮೊತ್ತವನ್ನು ಮೂರು, ಆರು ಅಥವಾ 12 ತಿಂಗಳ ಇಎಂಐಗಳಾಗಿ ಪರಿವರ್ತಿಸಲಾಗುತ್ತದೆ. ಆದರೆ ಇದರ ಅಡಿಯಲ್ಲಿ ಕನಿಷ್ಠ 5,000 ರೂ.ಗಳ ಖರೀದಿ ಮಾತ್ರ ಲಭ್ಯವಿದೆ. ಇದುವರೆಗೆ ನಾಲ್ವರು ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ.

suddiyaana