ಲಾಲ್​ಬಾಗ್​ನಲ್ಲಿ ಮಾವು ಮೇಳಕ್ಕೆ ಮುಹೂರ್ತ ಫಿಕ್ಸ್ – 9 ದಿನಗಳ ಕಾಲ ಹಣ್ಣಿನ ರಾಜನ ದರ್ಬಾರ್!

ಲಾಲ್​ಬಾಗ್​ನಲ್ಲಿ ಮಾವು ಮೇಳಕ್ಕೆ ಮುಹೂರ್ತ ಫಿಕ್ಸ್ – 9 ದಿನಗಳ ಕಾಲ ಹಣ್ಣಿನ ರಾಜನ ದರ್ಬಾರ್!

ರಸ್ತೆ ರಸ್ತೆಯಲ್ಲೂ ಘಮ. ಮಳಿಗೆಗಳಲ್ಲೂ ಸುವಾಸನೆ. ಬೆಂಗಳೂರಿನಲ್ಲೀಗ ಹಣ್ಣುಗಳ ರಾಜನದ್ದೇ ಕಾರುಬಾರು. ಎಲ್ಲೆಲ್ಲೂ ಮಾವಿನ ವ್ಯಾಪಾರ ಬಲುಜೋರು. ಇದೀಗ ಲಾಲ್​ಬಾಗ್​ನಲ್ಲೂ ರಾರಾಜಿಸೋಕೆ ಹಣ್ಣಿನ ರಾಜ ರೆಡಿಯಾಗಿದ್ದಾನೆ. ಮಾವು ಮೇಳಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಕರ್ನಾಟಕ ತೋಟಗಾರಿಕೆ ಇಲಾಖೆ (Horticulture department) ವತಿಯಿಂದ ಲಾಲ್‌ಬಾಗ್‌ನಲ್ಲಿ (Lalbagh) ಆಯೋಜಿಸಲಾಗುವ ವಾರ್ಷಿಕ ಮಾವು ಮೇಳವು ಈ ವರ್ಷ ಜೂನ್ 2 ರಂದು ಆರಂಭವಾಗಲಿದೆ. ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ (Lalbagh Botanical Garden) ಆವರಣದಲ್ಲಿ ಮಾವು ಮೇಳ ನಡೆಯಲಿದೆ. ಮಾವಿನ ಮೇಳವು ಜೂನ್ 11 ರವರೆಗೆ 9 ದಿನಗಳ ಕಾಲ ನಡೆಯಲಿದೆ ಮತ್ತು ಎಲ್ಲಾ ಗ್ರಾಹಕರಿಗೆ ಉಚಿತ ಪ್ರವೇಶ ನೀಡಲಾಗಿದೆ. ಮೇಳದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ಬೆಳೆಗಾರರು ಮಳಿಗೆಗಳನ್ನು ತೆರೆಯಲಿದ್ದು ಮಾವು ಮಾರಾಟ ಮಾಡಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ʼಪುಷ್ಪ – 2ʼ ಶೂಟಿಂಗ್‌ ಗೆ ತೆರಳಿದ್ದ ಕಲಾವಿದರ ಬಸ್‌ ಅಪಘಾತ – ಹಲವರಿಗೆ ಗಾಯ

ಪ್ರತಿ ವರ್ಷ ಸುಮಾರು 100 ರಿಂದ 120 ರಷ್ಟು ಮಳಿಗೆಗಳು ಮಾವು ಮೇಳದಲ್ಲಿರುತ್ತವೆ. ಆದರೆ, ಈ ವರ್ಷ ಇಳುವರಿ ಕಡಿಮೆಯಾಗಿರುವುದರಿಂದಾಗಿ ಮಳಿಗೆಗಳ ಸಂಖ್ಯೆಯನ್ನು 40 ಕ್ಕೆ ಇಳಿಸಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ. ಈ ವರ್ಷ ಆಲಿಕಲ್ಲು ಮಳೆಯಿಂದಾಗಿ ಮಾವಿನ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಡಿಮೆ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಲಾಲ್​ಬಾಗ್​ನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾವು ಮೇಳ ನಡೆಯುತ್ತದೆ. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಿಂದಾಗಿ ವಿಳಂಬವಾಗಿದೆ.ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಮಾವು ಬೆಳೆಗಾರರು ಇಲ್ಲಿ ಮಳಿಗೆಗಳನ್ನು ತೆರೆಯುತ್ತಾರೆ. ವಿವಿಧ ತಳಿಗಳ ಹಣ್ಣುಗಳು ಮಾವು ಪ್ರಿಯರನ್ನು ಸೆಳೆಯುತ್ತವೆ. ಮಲ್ಲಿಕಾ, ಮಾಲ್ಗೋವಾ, ಸೆಂಧೂರ, ಸಕ್ಕರೆಗುತ್ತಿ ಮತ್ತು ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ಮಾವು ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ.

suddiyaana