ಮೂಡಬಿದಿರೆಯಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಮುರಿದು ಬಿದ್ದ ಸೇತುವೆ – 8 ಜನರಿಗೆ ಗಾಯ, ದೇವರ ಮೂರ್ತಿಗೆ ಹಾನಿ!

ಮೂಡಬಿದಿರೆಯಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಮುರಿದು ಬಿದ್ದ ಸೇತುವೆ – 8 ಜನರಿಗೆ ಗಾಯ, ದೇವರ ಮೂರ್ತಿಗೆ ಹಾನಿ!

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಣ್ಣ ಸೇತುವೆ  ಮುರಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಸಾಗುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆಯನ್ನು ಪಲ್ಲಕ್ಕಿ ಹೊತ್ತವರು ದಾಟುತ್ತಿದ್ದಾಗ, ಜನದಟ್ಟಣೆಯ ಭಾರಕ್ಕೆ ಸಂಕವು ಏಕಾಏಕಿ ಕುಸಿದು ಬಿದ್ದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಆರ್‌ಸಿಬಿಗೆ 50ನೇ ಗೆಲುವು – ಸುದರ್ಶನ್ ಶತಕ ವ್ಯರ್ಥ, ಸೋತು ಶರಣಾದ ಗಿಲ್ ಪಡೆ

ಸಂಕ ಮುರಿದು ಬಿದ್ದ ರಭಸಕ್ಕೆ ಪಲ್ಲಕ್ಕಿ ಉರುಳಿದ್ದು, ಸಂಕದ ಮೇಲ್ಭಾಗದ ಬೀಮ್ (ತೊಲೆ) ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದಿದೆ. ಪರಿಣಾಮ ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತಿದ್ದ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

Kishor KV