ದಕ್ಷಿಣ ಕನ್ನಡದಲ್ಲಿ ರಣ ಬಿಸಿಲಿಗೆ ಜನ ಹೈರಾಣ! – ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

ದಕ್ಷಿಣ ಕನ್ನಡದಲ್ಲಿ ರಣ ಬಿಸಿಲಿಗೆ ಜನ ಹೈರಾಣ! – ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

ರಾಜ್ಯದಲ್ಲಿ ಹವಾಮಾನ ಬದಲಾಗುತ್ತಿದೆ. ತೀವ್ರ ಸ್ವರೂಪದ ಚಳಿಯಿಂದ ಅಧಿಕ ಬಿಸಿಲಿನ ವಾತಾವರಣ ನಿಧಾನವಾಗಿ ಸೃಷ್ಟಿಯಾಗುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಜಿಲ್ಲಾ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ: RCB Vs CSK ಪಂದ್ಯಕ್ಕೂ ಮುನ್ನವೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೊಂದು ವಿವಾದ! – ಜಿಬಿಎ ನೋಟಿಸ್!

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ  ದಿನದಿಂದ ದಿನಕ್ಕೆ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ.  ದಕ್ಷಿಣ ಕನ್ನಡದಲ್ಲಿ ಈಗಾಗಲೇ ಉಷ್ಣಾಂಶವು 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಉಷ್ಣಾಂಶ ಹೆಚ್ಚಳದಿಂದಾಗಿ ಶಾಖಾಘಾತ ಸಂಭವಿಸುವ ಸಾಧ್ಯತೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ಡಿಗ್ರಿ ಸೆಲ್ಶಿಯಸ್​ನಿಂದ 6.4 ಡಿಗ್ರಿ ಸೆಲ್ಶಿಯಸ್​​ನಷ್ಟು ತಾಪಮಾನ ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ಇದರ ಜೊತೆ ಮೈಮೇಲೆ ಬೆವರುಸಾಲೆ, ಮಾಂಸಖಂಡಗಳ ಸೆಳೆತ, ತಲೆಸುತ್ತುವಿಕೆ ಉಂಟಾಗಬಹುದು. ತೀವ್ರತರದ ಹಂತದಲ್ಲಿ ಇದು ಎದೆಯ ಸೆಳೆತ ಹಾಗೂ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಶಾಖಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಜನರು ಅತೀ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನೇನಿದೆ?

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅನಗತ್ಯವಾಗಿ ಬಿಸಿಲಿಗೆ ಹೋಗುವುದನ್ನು ತಪ್ಪಿಸಿ.

ಸಾಕಷ್ಟು ನೀರು ಕುಡಿಯಿರಿ. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೋನೇಟೆಡ್ ಪಾನೀಯಗಳಿಂದ ದೂರವಿರಿ.

ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ, ಟೋಪಿ ಮತ್ತು ಕನ್ನಡಕ ಬಳಸಿ.

ಮಕ್ಕಳನ್ನು ಮಧ್ಯಾಹ್ನದ ಬಿಸಿಲಿನಲ್ಲಿ ಆಟವಾಡಲು ಬಿಡಬೇಡಿ.

ಇನ್ನು ಬಿಸಿಲಿನ ತಾಪದಿಂದಾಗಿ ಮೀನುಗಾರಿಕೆಗೂ ಹೊಡೆತ ಬಿದ್ದಿದೆ. ಸಮುದ್ರದ ಮೇಲ್ಮೈ ನೀರು ಬಿಸಿಯಾಗುತ್ತಿರುವುದರಿಂದ ಮೀನುಗಳು ಸಮುದ್ರದಾಳಕ್ಕೆ ಹೋಗಿ ಸೇರುತ್ತಿವೆ. ಇದರಿಂದಾಗಿ ಮೀನುಗಾರರ ಬಲೆಗೆ ಮೀನುಗಳು ಬೀಳುತ್ತಿಲ್ಲ, ಇದು ಮೀನುಗಾರರನ್ನು ಆತಂಕಕ್ಕೆ ತಳ್ಳಿದೆ.

Shwetha M